ಜಿಲ್ಲೆ

ಬಸ್ ನಿಲ್ದಾಣಕ್ಕೆ ಕೂಡಿಬಂತು ಕಾಲ

ನರಸಿಂಹ ನಾಯಕ್ ಬೈಂದೂರು

ಬಹುನಿರೀಕ್ಷಿತ ಬೈಂದೂರು ಸರ್ಕಾರಿ ಬಸ್ ನಿಲ್ದಾಣ ಕಾಮಗಾರಿ ಆರಂಭಗೊಂಡು ಏಳು ವರ್ಷಗಳ ನಂತರ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಬಹುಕೋಟಿ ಅನುದಾನದ ಕಾಮಗಾರಿ ಭಾಗಶಃ ಪೂರ್ಣಗೊಂಡು ವರ್ಷಗಳು ಮೂರು ಉರುಳಿದ್ದು, ಅನುದಾನದ ಕೊರತೆಯಿಂದ ಉಳಿದ ಕಾಮಗಾರಿ ಸ್ಥಗಿತಗೊಂಡಿತ್ತು. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಪ್ರಸ್ತುತ ಈ ಕಾಮಗಾರಿ ಕೂಡ ಪೂರ್ಣಗೊಳ್ಳುವ ಹಂತದಲ್ಲಿದ್ದು, ಲೋಕಾರ್ಪಣೆಗೆ ದಿನ ನಿಗದಿಯಷ್ಟೇ ಬಾಕಿ ಇದೆ.

ಬೈಂದೂರಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡುವ ಉದ್ದೇಶದಿಂದ 2017ರಲ್ಲಿ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದದರು. ಜಿಲ್ಲೆಯ ಗ್ರಾಮೀಣ ಮತ್ತು ನಗರದ ಭಾಗಗಳಿಗೆ ಹೆಚ್ಚು ಬಸ್ ಒದಗಿಸುವುದಕ್ಕಾಗಿ ಉಡುಪಿಯಲ್ಲಿ 34 ಕೋಟಿ ರೂ. ಅನುದಾನದ ಬಸ್ ನಿಲ್ದಾಣ, 6 ಕೋಟಿ ರೂ. ವೆಚ್ಚದ ಡಿಪ್ಪೋ, ಬೈಂದೂರಿನಲ್ಲಿ 5 ಕೋಟಿ ರೂ. ವೆಚ್ಚದ ಬಸ್ ನಿಲ್ದಾಣ ಹಾಗೂ 6 ಕೋಟಿ ರೂ. ಹೆಚ್ಚುವರಿ ಡಿಪ್ಪೋ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿತ್ತು. 2018ರಲ್ಲಿ ಅಂದಿನ ಶಾಸಕ ಕೆ.ಗೋಪಾಲ ಪೂಜಾರಿ ಉಪಸ್ಥಿತಿಯಲ್ಲಿ ಕೆಎಸ್‌ಆರ್‌ಟಿಸಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಸರ್ಕಾರ ಬದಲಾದ್ದರಿಂದ ಅಂದಿನ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮತ್ತೊಮ್ಮೆ ಗುದ್ದಲಿ ಪೂಜೆ ನೆರವೇರಿಸಿದ್ದರು.

ನೂತನ ಸರ್ಕಾರಿ ಬಸ್ ನಿಲ್ದಾಣ ಉದ್ಘಾಟನೆಯಾದರೆ ಬೈಂದೂರಿನ ಅಭಿವೃದ್ಧಿಗೆ ಸಾಕಷ್ಟು ಸಹಕಾರಿಯಾಗಲಿದ್ದು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಸಹಿತ ಕ್ಷೇತ್ರಾದ್ಯಂತ ಸಂಚರಿಸಲು ಅನುಕೂಲವಾಗಲಿದೆ. ಸಾಕಷ್ಟು ಸಂಖ್ಯೆಯಲ್ಲಿ ಬಸ್ಸುಗಳೂ ಜನರಿಗೆ ಲಭ್ಯವಾಗಲಿದೆ.

ಯಾವ್ಯಾವ ಕಾಮಗಾರಿ ಬಾಕಿ?

ಈಗಾಗಲೇ ಲಭ್ಯವಾದ ಅನುದಾನದಲ್ಲಿ ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಬಳಿಕ ಸರ್ಕಾರ 2.20 ಕೋಟಿ ರೂ. ಹೆಚ್ಚುವರಿ ಅನುದಾನ ಮಂಜೂರು ಮಾಡಿದ್ದರಿಂದ ಪ್ರಸ್ತುತ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಾಂಕ್ರೀಟ್ ರಸ್ತೆ ನೆಲಹಾಸು, ಮೇಲ್ಛಾವಣಿ ಕಾಮಗಾರಿ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಕಾರಣ ಕೋಟ್ಯಂತರ ರೂ. ಅನುದಾನದಿಂದ ಕಾಮಗಾರಿ ಪೂರ್ಣಗೊಂಡು ಶೀಘ್ರ ಲೋಕಾರ್ಪಣೆಗೆ ಸಿದ್ಧತೆ ನಡೆಯುತ್ತಿದೆ.

ಮೂರು ತಿಂಗಳೊಳಗೆ ಬಸ್ ನಿಲ್ದಾಣ ಕಾರ್ಯಾರಂಭ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡುವುದಾಗಿ ಗಡುವು ಕೊಟ್ಟಿದ್ದೆ. ಅದರಂತೆ ಮಳೆಗಾಲ ಮುಗಿದ ತಕ್ಷಣ ಬಾಕಿ ಉಳಿದ ಕೆಲಸ ಆರಂಭಿಸಿದ್ದಾರೆ. ಇನ್ನೂ ಗಡುವು ಇರುವುದರಿಂದ ಶೀಘ್ರ ಬಸ್ ನಿಲ್ದಾಣದ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಬೇಕು. ಈಗಾಗಲೇ ಏಳು ವರ್ಷ ವ್ಯರ್ಥ್ಯವಾಗಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಡನೆ ಮಾತನಾಡಿದ್ದು, ಈ ನಿಟ್ಟಿನಲ್ಲಿ ತರಾತುರಿಯಲ್ಲಿ ಕಾಮಗಾರಿ ಸಾಗುತ್ತಿದೆ. -ಗುರುರಾಜ ಗಂಟಿಹೊಳೆ ಶಾಸಕ ಬೈಂದೂರು ಬಸ್ ನಿಲ್ದಾಣ ಕಾಮಗಾರಿ ಸಾಕಷ್ಟು ವಿಳಂಬವಾಗಿರುವುದು ನಿಜ. ಕೆಲವು ತಾಂತ್ರಿಕ ಅಂಶಗಳು ಇದಕ್ಕೆ ಕಾರಣ. ಇಲಾಖೆಯ ವಿವಿಧ ಹಂತದ ಅನುಮೋದನೆ ಬಳಿಕ ಅನುದಾನ ದೊರೆತಿದೆ. ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅತ್ಯುತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. -ರವೀಂದ್ರ ಇಂಜಿನಿಯರ್ https://www.vijayavani.net/shivarama-karanthas-memorial-day https://www.vijayavani.net/yadtadi-cooperative-society-building-inaugurated