ಬಾಳೆಹೊನ್ನೂರು: ರೂಪ ಮತ್ತು ರೂಪಾಯಿ ತುಂಬಾ ದಿನ ಉಳಿಯುವುದಿಲ್ಲ. ಮನುಷ್ಯನ ಒಳ್ಳೆಯತನ ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಸಮಯ, ಸ್ನೇಹ ಮತ್ತು ಆರೋಗ್ಯ ಜೀವನದ ಅಮೂಲ್ಯ ಸಂಪತ್ತು ಎಂಬುದನ್ನು ಮರೆಯಬಾರದು ಎಂದು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಗುರುವಾರ ನಡೆದ ಜಾನಪದ ಸಮ್ಮೇಳನದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಮನೆ ಅಂಗಳದ ಕಸವನ್ನು ಯಾರಾದರೂ ಸ್ವಚ್ಛಮಾಡಬಹುದು. ಆದರೆ ಮನದ ಕಸವನ್ನು ನಾವೇ ಸ್ವಚ್ಛ ಮಾಡಿಕೊಳ್ಳಬೇಕು. ಜೀವನದಲ್ಲಿ ಗುರಿ ಮತ್ತು ಗುರು ಬಹಳ ಮುಖ್ಯ. ಹಣ ಕೆಟ್ಟ ಚಟ ಕಲಿಸಿದರೆ ಹಸಿವು ಬದುಕಿನ ಪಾಠ ಕಲಿಸುತ್ತದೆ. ಹಣ ಮಾನವೀಯತೆ ಮರೆಸಿದರೆ ಹಸಿವು ಅದರ ಅರಿವು ಮೂಡಿಸುತ್ತದೆ ಎಂದರು.
ನಮ್ಮ ನಾಡಿನ ಜಾನಪದ ಜ್ಞಾನ ಅಮೂಲ್ಯ ಸಂಪತ್ತಾಗಿದ್ದು, ಓದು ಬರಹ ಬರಲಾರದ ಎಷ್ಟೋ ಜನರು ಜಾನಪದ ಸಂಪತ್ತನ್ನು ಸಂಪಾದಿಸಿದ್ದಾರೆ. ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಜಾನಪದ ಸಾಹಿತ್ಯದಲ್ಲಿ ಕಾಣಬಹುದು. ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಚಿಗುರೊಳ್ಳಿ ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ಕೆಂಡಾರ್ಚನೆ ನೆರವೇರಿತು. ಬೆಳಗ್ಗೆ ಶಯನೋತ್ಸವ, ಜಗದ್ಗುರು ಶಿವಾನಂದ ಕಾಫಿ ಎಸ್ಟೇಟಿನಲ್ಲಿ ವನದುರ್ಗ ಚೌಡೇಶ್ವರಿ ಮಂದಿರದಲ್ಲಿ ನಡೆಯಿತು. ಮುಕ್ತಿಮಂದಿರ, ಎಡೆಯೂರು, ಮಳಲಿ, ಹೂಲಿ, ಅಮ್ಮಿನಬಾವಿ, ಸಿಂಧನೂರು, ಸಂಗೊಳ್ಭಿ, ಬೇರುಗಂಡಿ, ದೋರನಹಳ್ಳಿ, ಅಚಲೇರಿ, ದೊಡ್ಡಸಗರ, ಎಮ್ಮಿಗನೂರು ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಗಳ ಶಿವಾಚಾರ್ಯರು ಉಪಸ್ಥಿತರಿದ್ದರು. ಅನುಶ್ರೀ ಆದಿಗೌಡ ಭರತ ನಾಟ್ಯ ಪ್ರದರ್ಶನ ನೀಡಿದರು. ಶಂಕ್ರಯ್ಯ ಗವಾಯಿ ಅವರಿಂದ ಸಂಗೀತ ಸೇವೆ ನಡೆಯಿತು. ಗುರುಲಿಂಗಯ್ಯ ಹಿರೇಮಠ ಹಿತ್ತಲ ಶಿರೂರು, ಪ್ರಕಾಶ ಬೆಂಡಿಗೇರಿ, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.