ಬೆಳಗಾವಿ: ವಿಚಾರ ದೊಡ್ಡದಾದರೆ ಮಾತ್ರ ವ್ಯಕ್ತಿಗಳು ದೊಡ್ಡವರಾಗುತ್ತಾರೆ. ದೊಡ್ಡಮಟ್ಟದ ಆಲೋಚನೆಗಳಿಂದ ದೊಡ್ಡ ಕಾರ್ಯಗಳು ಸಾಧ್ಯ ಎಂದು ಲಿಂಗರಾಜ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಅಭಿಪ್ರಾಯಪಟ್ಟರು.
ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಹಾಗೂ 2003-04ನೇ ಸಾಲಿನ ಹಳೇ ವಿದ್ಯಾರ್ಥಿಗಳ ಸಹಯೋಗದಲ್ಲಿ ಶನಿವಾರ ಚನ್ನಮ್ಮ ವೃತ್ತದ ಹತ್ತಿರದ ಜಿ.ಸಿ.ಟಿ.ಸಿ (ಬಿ.ಇಡಿ) ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರಿಗೆ ಸಮಯ ಪ್ರಜ್ಞೆ, ಭಾಷಾ ಪ್ರೌಢಿಮೆ ಇರಬೇಕು, ಗುರುವಂದನಾ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣ. ಯುವ ಪೀಳಿಗೆಗೂ ಸೂರ್ತಿದಾಯಕವಾಗಲಿ ಎಂದರು. 20 ವರ್ಷಗಳ ಹಿಂದಿನ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಸಂತಸ ತಂದಿದೆ. ಓದಿಗಿಂತ ಜ್ಞಾನ ಸಂಪಾದನೆ ಮುಖ್ಯ. ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಹುದ್ದೆ ಅಲಂಕರಿಸಿದವರ ಬಳಷ್ಟು ಉದಾಹರಣೆಗಳಿವೆ. ಎಲ್ಲಾ ಸಾಹಿತಿಗಳು, ಸಾಧಕರು, ಮಾತೃ ಭಾಷೆಯಲ್ಲಿ ಓದಿ ಸಾಧಕರಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಂ. ಸಿಂಧೂರ ಮಾತನಾಡಿ, ಜೀವನದಲ್ಲಿ ಸಮಸ್ಯೆಗಳು ಸಹಜ. ಸಮಸ್ಯೆ ಎದುರಿಸಿ ನಿಂತಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಜಿ.ಸಿ.ಟಿ.ಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ಎಲ್.ಅಶೋಕ ಕುಮಾರ ಮಾತನಾಡಿದರು. ಗೀತಾ ದೇಸೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಅಪ್ಪಣ್ಣ ಜಂಬಗಿ ಸ್ವಾಗತಿಸಿದರು. ಮಹಾಂತೇಶ ಕುರಬೇಟ, ಕಿರಣ ಗಣಾಚಾರಿ ನಿರೂಪಿಸಿದರು.