ಕಾಸರಗೋಡು: ಜಿಲ್ಲೆಯ ಹೊಸದುರ್ಗ ತಾಲೂಕಿನ ಪುಲ್ಲೂರು ಕೇಳೋತ್ ನಿವಾಸಿ ಪೊನ್ನಪ್ಪನ್ ಎಂಬುವರ ಪುತ್ರ, ಟೈಲ್ಸ್ ಕಾರ್ಮಿಕ ಮಣಿಕಂಠನ್(36) ಎಂಬುವರ ಮೃತದೇಹ ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಇದೇ ಮನೆಯಲ್ಲಿದ್ದ ಇವರ ಸಹೋದರಿ ಸುಶೀಲಾ ಅವರ ಪತಿ, ಬೆಂಗಳೂರು ನಿವಾಸಿ ಗಣೇಶ ನಾಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ನೀಲಕಂಠನ್ ಅವರ ಇನ್ನೊಬ್ಬ ಸಹೋದರಿ ಲೀಲಾವತಿ ಅವರ ಪುತ್ರ ಸೋಮವಾರ ಬೆಳಗ್ಗೆ ಬಂದು ನೋಡಿದಾಗ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಕೀಲಿ ಕೈ ಇರಿಸುವ ಜಾಗದಿಂದ ಬೀಗ ಪಡೆದು ಬಾಗಿಲು ತೆರೆದು ನೋಡಿದಾಗ ರಕ್ತದ ಮಡುವಿನಲ್ಲಿ ಮಣಿಕಂಠನ್ ಬಿದ್ದಿದ್ದರು.
ಮಣಿಕಂಠ ಅವರ ಪತ್ನಿ ಮತ್ತು ಮಗು ವಾರದ ಹಿಂದೆ ಬೆಂಗಳೂರಿನ ತವರಿಗೆ ತೆರಳಿದ್ದರು. ಮಣಿಕಂಠ ಮತ್ತು ಗಣೇಶ ನಿರ್ಮಾಣ ಕಾಮಗಾರಿ ಕಾರ್ಮಿಕರಾಗಿದ್ದು, ಹಣಕಾಸಿನ ವಿಚಾರದಲ್ಲಿ ಇವರ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ನಾಪತ್ತೆಯಾಗಿರುವ ಗಣೇಶನೇ ಕೊಲೆ ಮಾಡಿದ್ದಾಗಿ ಶಂಕಿಸಲಾಗಿದೆ.
ಅಂಬಲತ್ತರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬೇಕಲ ಡಿವೈಎಸ್ಪಿ ಸಿ.ಕೆ ಸುನೀಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯನ್ನು ಬೆಂಗಳೂರಿಗೂ ವಿಸ್ತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Murder, Bengaluru, Tiles, Worker, Manikantan, Ganesh, Police, Investigation, ಕೊಲೆ, ಬೆಂಗಳೂರು, ಕಾರ್ಮಿಕ, ಮಣಿಕಂಠನ್, ಗಣೇಶ್, ಪೊಲೀಸ್, ತನಿಖೆ