ಉಡುಪಿ: ಅವೈಜ್ಞಾನಿಕ ಮಾದರಿಯ ಕಾನೂನು ಹಾಗೂ ನಿಯಮಗಳಿಂದ ಆವೆಮಣ್ಣಿನ ಸಾಗಾಟಕ್ಕೆ ಬಹಳಷ್ಟು ತೊಂದರೆಯಾಗುತ್ತಿದ್ದು, ಹಂಚಿನ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಸುಮಾರು 2 ಸಾವಿರಕ್ಕೂ ಅಧಿಕ ಕಾರ್ಮಿಕ ಕುಟುಂಬಗಳು ಅತಂತ್ರವಾಗುವ ಆತಂಕದಲ್ಲಿದ್ದಾರೆ ಹಂಚು ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ್ ಟಿ. ಸೋನ್ಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಣಿ ಇಲಾಖೆ ದಶಕಗಳಿಂದ ಇಲ್ಲದ ನಿಯಮಗಳನ್ನು ಜಾರಿಗೊಳಿಸಿ ಆವೆಮಣ್ಣು ತೆಗೆಯಲು ಬಿಡುತ್ತಿಲ್ಲ. ಹಂಚಿನ ಕಾರ್ಖಾನೆಗೆ ಬೇಕಾದ ಆವೆ ಮಣ್ಣನ್ನು ಖಾಸಗಿ ಭೂಮಿಯಿಂದ ಮಾತ್ರ ತೆಗೆಯಲಾಗುತ್ತಿದೆ. ಈವರೆಗೂ ಸರ್ಕಾರಿ ಭೂಮಿಯಿಂದ ಆವೆ ಮಣ್ಣನ್ನು ತೆಗೆದಿಲ್ಲ. ಆದರೂ ರಾಯಧನ ಪಾವತಿಸಲಾಗುತ್ತಿತ್ತು. ಈಗ ಏಕಾಏಕಿ ಉಡುಪಿ ಜಿಲ್ಲಾ ಖನಿಜ ಇಲಾಖೆ ಒಟ್ಟು 14 ಇಲಾಖೆಗಳಿಂದ ಅನುಮತಿಯನ್ನು ಪಡೆದು ಗಣಿಗಾರಿಕೆ ನಡೆಸಿ ಎಂಬುದಾಗಿ ಷರತ್ತು ವಿಧಿಸಿದೆ. ದ.ಕ. ಜಿಲ್ಲೆ ಸಹಿತ ರಾಜ್ಯದ ಯಾವುದೇ ಭಾಗದಲ್ಲಿ ಇಲ್ಲದೇ ಇರುವ ನಿಯಮಗಳನ್ನು ಉಡುಪಿಯಲ್ಲಿ ಜಾರಿಗೊಳಿಸಿದ್ದಾರೆ. ಫೆಬ್ರವರಿ, ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಮಾತ್ರ ಆವೆಮಣ್ಣು ಲಭ್ಯವಾಗುತ್ತದೆ. ಆದರೆ ಇಲಾಖೆ ನಿಯಮದಿಂದ ಬೇಗನೇ ಅನುಮತಿ ಸಿಗುವ ಯಾವುದೇ ಲಕ್ಷಣಗಳಿಲ್ಲ. ಎಂದು ಆರೋಪಿಸಿದರು.
ಶತಮಾನಗಳಿಂದ ಮಂಗಳೂರು ಹಂಚು ಪ್ರಸಿದ್ಧವಾಗಿದೆ. ಒಂದು ಕಾಲದಲ್ಲಿ ಮಂಗಳೂರಿನಲ್ಲಿ 80, ಕುಂದಾಪುರದಲ್ಲಿ 17, ಉತ್ತರ ಕನ್ನಡ ಜಿಲ್ಲೆಯಲ್ಲಿ 16 ಕಾರ್ಖಾನೆಗಳು ಕಾರ್ಯಾಚರಿಸುತ್ತಿತ್ತು. ಆದರೆ ಆವೆ ಮಣ್ಣಿನ ಕೊರತೆ ಹಾಗೂ ಕಾರ್ಮಿಕರ ಕೊರತೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಮುಚ್ಚಲ್ಪಟ್ಟಿದೆ. ಕುಂದಾಪುರದಲ್ಲಿ ಕೇವಲ 9, ಮಂಗಳೂರಿನಲ್ಲಿ 4 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಅಧಿಕಾರಿಗಳು ಮರಳು, ಜಲ್ಲಿಕಲ್ಲಿನ ಗಣಿಗಾರಿಕೆಯಂತೆ ಆವೆಮಣ್ಣಿನ ಗಣಿಗಾರಿಕೆಯನ್ನು ಪರಿಗಣಿಸುವುದು ಸರಿಯಲ್ಲ. ಮರಳನ್ನು ಸಾಗಿಸಲು ಇರುವಂತೆ ಪರ್ಮಿಟ್ ಮಾದರಿಯನ್ನು ಅಳವಡಿಸಿಕೊಂಡು ಆವೆ ಮಣ್ಣನ್ನು ಸಾಗಿಸಲು ಅಸಾಧ್ಯ. ದಿನವೊಂದರಲ್ಲಿ ನೂರಾರು ಲಾರಿಗಳು ಓಡಾಟ ನಡೆಸುತ್ತವೆ. ಕುಂದಾಪುರ ಭಾಗದಲ್ಲಿ ಸರ್ವರ್ ಸಮಸ್ಯೆಯಿಂದಾಗಿ 10 ಕಾರ್ಖಾನೆಗಳಿಗೇ ಬೇಕಾದಷ್ಟು ಮಣ್ಣು ತರಲು ಅಸಾಧ್ಯ ಎಂದರು.
ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಿದ್ದೇವೆ. ಜೊತೆಗೆ ಮಾನ್ಯ ಗೌರವಾನ್ವಿತ ಸಚಿವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಉಡುಪಿ ಜಿಲ್ಲೆ, ಕಾರ್ಮಿಕ ಅಧಿಕಾರಿಗಳು, ಉಡುಪಿ ಜಿಲ್ಲೆ ಮನವಿಯನ್ನು ಸಲ್ಲಿಸಲಾಗಿದ್ದು, ಯಾವುದೇ ಸ್ಪಂದನೆ ದೊರಕಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಲೀಕರ ಸಂಘದ ಕಾರ್ಯದರ್ಶಿ ಕೆ.ಸೀತಾರಾಮ ನಕ್ಕತ್ತಾಯ, ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ನರಸಿಂಹ, ಕಾರ್ಯದರ್ಶಿ ಎಚ್.ನರಸಿಂಹ, ಸಚಿನ್ ನಕ್ಕತ್ತಾಯ ಉಪಸ್ಥಿತರಿದ್ದರು.