ಮೈಸೂರು: ಬೆಂಗಳೂರಿನ ಟಿಕ್‌ಟಾಕ್ ಸ್ಟಾರ್ ನವೀನ್ ಅಪಹರಣ ಹಾಗೂ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದು, ಎಂಟು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ನಗರಕ್ಕೆ ಇಬ್ಬರು ಯುವತಿಯರೊಂದಿಗೆ ಆ.27 ರಂದು ಆಗಮಿಸಿದ ನವೀನ್ ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದ ಸಂದರ್ಭ ಅವರನ್ನು ಅಪಹರಣ ಮಾಡಲಾಗಿತ್ತು. ಕಾರಿನಲ್ಲಿ ಆಗಮಿಸಿದ ಕೆಲವರು ಅಂದು ರಾತ್ರಿ 9.45ರ ಸಮಯದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಆ.29 ರಂದು ನವೀನ್ ಮೃತದೇಹ ಬಳಿಕ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಶವ ಪತ್ತೆಯಾಗಿತ್ತು. ನಂತರ
ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು. ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬವರ ಕೊಲೆ ಪ್ರಕರಣದಲ್ಲಿ ನವೀನ್ ಆರೋಪಿಯಾಗಿದ್ದ. ನವೀನ್ ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ. ಕೊಲೆಗೆ ಪ್ರತಿಕಾರವಾಗಿ ಹತ್ಯೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರ ಬರಬೇಕಾಗಿದೆ. ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.