ಗುಂಡ್ಲುಪೇಟೆ ತಾಲೂಕಿನ ಮುಂಟೇಪುರ ಸಮೀಪ ಹುಲಿಯೊಂದು ತನ್ನ ಎರಡು ಮರಿಗಳ ಜತೆ ರಸ್ತೆಯಲ್ಲಿ ಹೋಗುತ್ತಿದ್ದ ದೃಶ್ಯ. 
ಜಿಲ್ಲೆ

ಮರಿಗಳೊಂದಿಗೆ ರಸ್ತೆಯಲ್ಲಿ ಕಾಣಿಸಿಕೊಂಡ ಹುಲಿ

ಎಂ.ರವಿ

ಗುಂಡ್ಲುಪೇಟೆ: ತಾಲೂಕಿನ ಮುಂಟೇಪುರ ಸಮೀಪ ಹುಲಿಯೊಂದು ತನ್ನ ಎರಡು ಮರಿಗಳ ಜತೆ ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಭಾಗದ ಜನರ ಭೀತಿಗೆ ಕಾರಣವಾಗಿದೆ.

ಮಂಗಳವಾರ ರಾತ್ರಿ ಮುಂಟೀಪುರದಿಂದ ಮೂಖಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಎರಡು ಮರಿಗಳೊಂದಿಗೆ ತಾಯಿ ಹುಲಿ ಹೋಗುತ್ತಿರುವ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ.

ತಾಯಿ ಹುಲಿ ಕಾರಿನ ಹೆಡ್‌ಲೈಟ್ ಬೆಳಕಿನತ್ತ ದಿಟ್ಟಿಸಿ ನೋಡಿದರೆ, ಮರಿಗಳು ಹಿಂದೆ ಮುಂದೆ ಓಡಾಡುತ್ತ ಕತ್ತಲಿನೆಡೆಗೆ ಹೋಗುವ ಪ್ರಯತ್ನ ನಡೆಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಅಕ್ಕಪಕ್ಕದ ಗ್ರಾಮಗಳ ಜನರು ಹಾಗೂ ರೈತರು ಆತಂಕ್ಕೊಳಗಾಗಿದ್ದಾರೆ.

ಮಂಗಳವಾರ ರಾತ್ರಿ ಹುಲಿಗಳು ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರು ವಿಡಿಯೋ ಕಳಿಸಿ ಮಾಹಿತಿ ನೀಡಿದ್ದಾರೆ. ಕೂಡಲೇ ಸಿಬ್ಬಂದಿಯೊಡನೆ ತೆರಳಿ ಕೆಲವು ತೋಟಗಳಲ್ಲಿ ಮೂಡಿದ್ದ ಹೆಜ್ಜೆ ಗುರುತಿನ ಜಾಡು ಹಿಡಿದು ಪರಿಶೀಲಿಸಿದಾಗ ಹುಲಿಗಳು ನೆರೆಯ ಓಂಕಾರ್ ವಲಯದ ಅರಣ್ಯ ಪ್ರದೇಶಕ್ಕೆ ಹೋಗಿರುವುದು ಖಚಿತವಾಗಿದೆ. ಅವು ಮತ್ತೊಮ್ಮೆ ಕಾಣಿಸಿಕೊಂಡರೆ ಕಾಡಿಗಟ್ಟಲಾಗುವುದು ಎಂದು ಬಫರ್ ವಲಯದ ಪ್ರಭಾರ ವಲಯಾರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.