ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲನಿ ಸಮೀಪ ಜಮೀನಿನಲ್ಲಿ ಕಾಣಿಸಿಕೊಂಡ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿದೆ.  
ಜಿಲ್ಲೆ

ಹುಲಿ ಪ್ರತ್ಯಕ್ಷ, ಆತಂಕದಲ್ಲಿ ಗ್ರಾಮಸ್ಥರು

ಶಿವಶಂಕರ್ ಎಂ. ಹೆಬ್ಬಳ್ಳ

ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಕಾಲನಿಯ ಕಾಡಂಚಿನ ಜಮೀನಿನಲ್ಲಿ ಪದೇ ಪದೆ ಹುಲಿ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿದೆ.

ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯದ ಕಾಡಂಚಿನ ಗ್ರಾಮದ ನಂದೀಶ್ ಅವರ ಬಾಳೆ, ಮುಸುಕಿನಜೋಳ ಬೆಳೆದಿರುವ ಜಮೀನಿನಲ್ಲಿ ಕಳೆದ ಕೆಲವು ದಿನಗಳಿಂದ ಹುಲಿ ಬೀಡುಬಿಟ್ಟಿದೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಜಮೀನಿನಲ್ಲಿ ಹುಲಿ ಓಡಾಡಿರುವ ಹೆಜ್ಜೆಯ ಗುರುತುಗಳು ಹಾಗೂ ಕಾಡುಹಂದಿಯನ್ನು ಬೇಟೆಯಾಡಿರುವ ಗುರುತು ಕಂಡುಬಂದಿವೆ. ಅಲ್ಲದೆ ಭಾನುವಾರ ಬಾಳೆ ತೋಟದಲ್ಲಿ ಮಲಗಿದ್ದ ಹುಲಿಯನ್ನು ನೋಡಿದ ಕಾರ್ಮಿಕರು ಜೀವಭಯದಿಂದ ಓಡಿಹೋಗಿದ್ದಾರೆ. ಇದರಿಂದ ಈ ಭಾಗದ ರೈತರಲ್ಲಿ ಆತಂಕ ಮನೆಮಾಡಿದ್ದು, ಕೂಡಲೇ ಹುಲಿ ಸೆರೆಹಿಡಿಯಲು ಕ್ರಮಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಕೂಂಬಿಂಗ್ ನಡೆಸಿ ಹುಲಿಯನ್ನು ಜಮೀನಿನಿಂದ ಹೊರಗೆ ಅಟ್ಟಿದರು. ಆದರೂ ಅದು ಮತ್ತೆ ಜಮೀನಿನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹುಲಿಯ ಆರೋಗ್ಯಸ್ಥಿತಿ ಪತ್ತೆಗೆ ಕ್ಯಾಮರಾಗಳು ಅಳವಡಿಸಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಬೋನನ್ನು ಸಹ ಅಳವಡಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.