ಜಿಲ್ಲೆ

ಎಸ್ಟೇಟ್‌ಗಳಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ

ಕಿರಣ್ ಗೌಡ.ಜಿ

ಸಿದ್ದಾಪುರ: ತಿತಿಮತಿ ವಲಯದ ಬಾಡಗ ಬಾಣಂಗಾಲ ಮತ್ತು ಮೇಕೂರು, ಹೊಲಮಾಳ, ಮಠ ಪೈಸಾರಿ, ಬಜೆಗೊಳ್ಳಿ ಎಸ್ಟೇಟ್, ವಡ್ಡರಲ್ಲಿ ಎಸ್ಟೇಟ್, ಪಾರ್ವತಿ ಎಸ್ಟೇಟ್‌ಗಳಲ್ಲಿ ಹುಲಿಯ ಚಲನ ವಲನದ ಹೆಜ್ಜೆ ಗುರುತು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಇವರ ಮಾರ್ಗದರ್ಶನದ ಮೇರೆಗೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ.

ಅಲ್ಲಲ್ಲಿ ಹೆಜ್ಜೆ ಗುರುತುಗಳು ಕಂಡುಬಂದಿದ್ದು ಹುಲಿ ಎಲಿಕಲ್ ಬೆಟ್ಟದ ಕಡೆಗೆ ಹೋಗಿರುವ ಕುರುಹುಗಳು ಪತ್ತೆಯಾಗಿರುತ್ತದೆ. ಜೋರು ಮಳೆಯಿಂದ ಸಿಬ್ಬಂದಿಗೆ ಹುಲಿಯ ಚಲನ ವಲನದ ಹೆಜ್ಜೆ ಗುರುತು ಸರಿಯಾಗಿ ಗೋಚರಿಸದೆ ಸಂಜೆ ವೇಳೆಗೆ ಕಾರ್ಯಾಚರಣೆ ನಿಲ್ಲಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಶಶಿ, ಪಿಟಿಆರ್‌ಆರ್‌ಟಿ ಸಿಬ್ಬಂದಿ ಹಾಗೂ ಅರಣ್ಯ ವೀಕ್ಷಕರು ಭಾಗವಹಿಸಿದ್ದರು.