ಜಿಲ್ಲೆ

ಮೈಸೂರಿನಲ್ಲಿ ಮುಂದುವರಿದ ಹುಲಿ ಸೆರೆ ಕಾರ್ಯಾಚರಣೆ

ಮೈಸೂರು: ನಗರ ಸಮೀಪದ ಚಿಕ್ಕಕಾನ್ಯ, ಏಚಗಳ್ಳಿ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ ಭಾಗಗಳಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದೆ.

ಭಾನುವಾರ ಬೆಳಗ್ಗೆ ಏಚಗಳ್ಳಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್.ಬಸವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಲಕ್ಷ್ಮೀಕಾಂತ, ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ಇನ್ನಿತರ ಅಧಿಕಾರಿಗಳ ತಂಡ ಚಿರತೆ ಕಾರ್ಯಪಡೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಆ ಸ್ಥಳದಲ್ಲಿ ಹುಲಿ ಇರುವಿಕೆಯ ಬಗ್ಗೆ ಯಾವುದೇ ಕುರುಹುಗಳು ಕಂಡುಬಂದಿಲ್ಲ.

ಹುಲಿಯ ಚಲನವಲನಗಳನ್ನು ಪತ್ತೆಹಚ್ಚಲು ಅಳವಡಿಸಿರುವ ಎಲ್ಲ ಕ್ಯಾಮರಾಗಳ ಛಾಯಾಚಿತ್ರಗಳನ್ನು ವೀಕ್ಷಿಸಲಾಗಿದ್ದು, ಹುಲಿಯ ಛಾಯಾಚಿತ್ರ ಸೆರೆಯಾಗಿಲ್ಲ. ಹುಲಿ ಸೆರೆ ಕಾರ್ಯಾಚರಣೆ ಮುಂದುವರಿದಿದ್ದು, ಈ ಸಂಬಂಧ ನಿಯೋಜಿಸಲಾಗಿರುವ ಪಶುವೈದ್ಯರ ತಂಡ, ಚಿರತೆ ಕಾರ್ಯಪಡೆ ತಂಡ, ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲ ಕಡೆ ಹುಲಿಯ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜತೆಗೆ, ಹುಲಿಯ ಚಲನವಲನಗಳನ್ನು ಗಮನಿಸಲು ಅದು ಕಾಣಿಸಿಕೊಂಡಿರುವ ಗ್ರಾಮಗಳಲ್ಲಿ ಅಳವಡಿಸಿರುವ ಕ್ಯಾಮರಾಗಳಲ್ಲಿ ನೇರ ದೃಶ್ಯಾವಳಿಗಳನ್ನು ವೀಕ್ಷಿಸಲಾಗುತ್ತಿದೆ. ಸುತ್ತಮುತ್ತ ಡ್ರೋನ್ ಕ್ಯಾಮರಾ ಮೂಲಕವೂ ಪರಿಶೀಲನೆ ನಡೆಯುತ್ತಿದೆ. ಆದರೆ, ಭಾನುವಾರ ಯಾವುದೇ ಕ್ಯಾಮರಾದಲ್ಲಿ ಹುಲಿಯ ಚಲನವಲಗಳು ದಾಖಲಾಗಿಲ್ಲ.

ಸಂಜೆ ಚಿಕ್ಕನಹಳ್ಳಿ ಮೀಸಲು ಅರಣ್ಯದ ಅಂಚಿನಲ್ಲಿ ಹುಲಿ ಇರುವಿಕೆಯ ಬಗ್ಗೆ ಪತ್ತೆ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಸದರಿ ಕಾರ್ಯಕ್ಕೆ ನೆಟ್‌ವರ್ಕ್ ಕ್ಯಾಮರಾ, ಐ.ಆರ್. ಕ್ಯಾಮರಾಗಳನ್ನು ಬಳಸಿಕೊಳ್ಳಲಾಗಿದೆ. ಹುಲಿಯ ಚಲನವಲನ ಕಂಡುಬಂದಿರುವ ಗ್ರಾಮಗಳ ಜನರು ರಾತ್ರಿ ವೇಳೆ ಓಡಾಡದಂತೆ, ವದಂತಿಗಳಿಗೆ ಭಯಭೀತರಾಗದಂತೆ, ಕಾರ್ಯಾಚರಣೆ ಮುಗಿಯುವವರೆಗೂ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್.ಬಸವರಾಜು ಮನವಿ ಮಾಡಿದ್ದಾರೆ.