ಜಿಲ್ಲೆ

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ,  ಟೈ ಹುಬ್ಬಳ್ಳಿ ಶೃಂಗಸಭೆ ಉದ್ಘಾಟಿಸಿದ ಸಚಿವ ಕಡಿಮೆ ಖರ್ಗೆ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ರಾಜಧಾನಿ ಬೆಂಗಳೂರು ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿ ಹೊಂದಲು ಮೂರ್ನಾಲ್ಕು ದಶಕಗಳನ್ನು ತೆಗೆದುಕೊಂಡಿದೆ. ಇಂತಹ ಅಭಿವೃದ್ಧಿ ರಾಜ್ಯದ ಉಳಿದ ಭಾಗಗಳಿಗೂ ವಿಸ್ತರಣೆಯಾಗಬೇಕೆಂಬುದು ಎಲ್ಲರ ಸಹಜ ಬೇಡಿಕೆ. ಈ ನಿಟ್ಟಿನಲ್ಲಿ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ರ್ಖಗೆ ಹೇಳಿದರು.

ಇಲ್ಲಿಯ ಡೆನಿಸನ್ಸ್ ಹೋಟೆಲ್ ನಲ್ಲಿ ಟೈ ಹುಬ್ಬಳ್ಳಿ ವತಿಯಿಂದ ಏರ್ಪಡಿಸಲಾಗಿರುವ ಎರಡು ದಿನಗಳ ಶೃಂಗಸಭೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಪ್ರತಿ ಜಿಲ್ಲೆಗೂ ಅದರದೇ ಆದ ವಿಶೇಷತೆ ಇದ್ದು, ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಆಧಾರದಲ್ಲಿ ಕೈಗಾರಿಕೆಗಳು ಬೆಳೆದಿವೆ. ಆದರೆ, ಹುಬ್ಬಳ್ಳಿ ಧಾರವಾಡದಲ್ಲಿ ಅಂತಹ ಪೂರಕ ಸಂಪತ್ತು ಇಲ್ಲ. ಆದರೆ, ಇಲ್ಲಿ ಶೈಕ್ಷಣಿಕ ಬೆಳವಣಿಗೆ ಉತ್ತಮವಾಗಿದೆ. ಪ್ರತಿಭಾವಂತರು, ಕುಶಲಕಲೆ ಹೊಂದಿರುವ ಯುವ ಸಮೂಹ ಇಲ್ಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದರು.

ರಾಜ್ಯದ ಬೆಂಗಳೂರು ಹೊರತು ಪಡಿಸಿ ದ್ವೀತಿಯ ಸ್ತರದ ನಗರಗಳಲ್ಲಿಯೇ ಕಳೆದ ವರ್ಷ 2 ಸಾವಿರ ಸ್ಟಾರ್ಟಪ್ ಗಳು ಆರಂಭವಾಗಿವೆ. ಅವುಗಳಲ್ಲಿ 986 ಸ್ಟಾರ್ಟಪ್ ಗಳಿಗೆ ಸರ್ಕಾರ ನೆರವು ನೀಡಿದೆ. ಈ ಪೈಕಿ ಶೇ. 28ರಷ್ಟು ಸ್ಟಾರ್ಟಪ್ ಗಳನ್ನು ಮಹಿಳೆಯರು ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು (ಐಐಐಟಿ) ಸೆಂಟರ್ ಆಫ್ ಎಕ್ಸಲ್ಲನ್ಸ್ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಜಾಗತಿಕವಾಗಿ ಸುಮಾರು 300 ದಶಲಕ್ಷ ನೌಕರಿಗಳು ಸೃಷ್ಟಿಯಾಗುತ್ತಿದ್ದು, ಅವು ಪ್ರತಿಭಾವಂತರಿಗಾಗಿ ಕಾಯುತ್ತಿವೆ. ಅವು ಉತ್ತಮ ಸ್ಕಿಲ್ ಬೆಳೆಸಿಕೊಂಡವರ ಪಾಲಾಗುತ್ತವೆ. ಈ ಹಿನ್ನೆಲೆಯಲ್ಲಿ ಕುಶಲತೆ ಕಲಿಸಲು ರಾಜ್ಯ ಸರ್ಕಾರ ನಿಪುಣ ಕರ್ನಾಟಕ ಯೋಜನೆ ರೂಪಿಸಿದೆ. "ಸ್ಕಿಲ್ ಲೋಕಲಿ, ವರ್ಕ್ ಗ್ಲೋಬಲಿ' ಎಂಬ ಘೋಷವಾಕ್ಯದಡಿ ತರಬೇತಿ ನೀಡಲಾಗುತ್ತದೆ ಎಂದರು.

ಹುಬ್ಬಳ್ಳಿ ಧಾರವಾಡ ಹಾಗೂ ಬೆಳಗಾವಿ ಸೇರಿ ತ್ರಿವಳಿ ನಗರಗಳ ಯುವಕರ ಕೌಶಲ ಬಳಸಿಕೊಳ್ಳಲಾಗುವುದು. ಇದಕ್ಕಾಗಿ ಫ್ಲ್ಯಾಟ್ ಫ್ಲೋರ್ ಫ್ಯಾಕ್ಟರಿ (ಪ್ಲಗ್ ಆ್ಯಂಡ್ ಪ್ಲೇ) ವ್ಯವಸ್ಥೆ ಮಾಡಿಕೊಡಲಾಗುವುದು. ಇದನ್ನು ಬಜೆಟ್ ನಲ್ಲಿ ಸೇರಿಸಿ ಜಾರಿಗೆ ಪ್ರಯತ್ನ ಮಾಡಲಾಗುವುದು. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಬಳಿಯ ಸ್ಟಾವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ಟಿಪಿಐ) ಇದನ್ನು ಪುನರ್ ಅಭಿವೃದ್ಧಿ ಪಡಿಸಿ ಐಟಿ ಬಿಟಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವಂತೆ ಮಾಡಲಾಗುವುದು ಎಂದು ಖರ್ಗೆ ಭರವಸೆ ನೀಡಿದರು.

ಟೈಕಾನ್ ಈ ಭಾಗದಲ್ಲಿ ಉದ್ಯಮ ಬೆಳವಣಿಗೆಗೆ ಏನೇ ಕ್ರಮ ಕೈಗೊಂಡರು ಅದಕ್ಕೆ ಸರ್ಕಾರ ಸಹಾಯ ಸಹಕಾರ ನೀಡಲು ಸದಾ ಮುಂದೆ ಇರಲಿದೆ. ಮುಂದಿನ ಐದು ವರ್ಷದ ನೀಲನೆಯೊಂದಿಗೆ ಬಂದರೆ ಅದಕ್ಕೆ ಬೇಕಾದ ಸೌಲಭ್ಯ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬೆಂಗಳೂರು, ಮೈಸೂರು ನೋಡಿದರೆ ಹುಬ್ಬಳ್ಳಿ ಧಾರವಾಡ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿವೆ. ಈ ಭಾಗದಲ್ಲಿಯೂ ಅಭಿವೃದ್ಧಿಗೆ ಗಮನ ಹರಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು. ಎಲ್ಲ ವಿಚಾರದಲ್ಲಿ ಬೆಂಗಳೂರಿಗೆ ಸ್ಪರ್ಧೆ ಮಾಡಲು ಆಗುವುದಿಲ್ಲ. ಹಾಗಾಗಿ ಇಲ್ಲಿಗೆ ಬರುವ ಕೈಗಾರಿಕೋದ್ಯಮಿಗಳಿಗೆ ಒಂದಿಷ್ಟು ಪ್ರೋತ್ಸಾಹ, ಸವಲತ್ತು, ರಿಯಾಯಿತಿಗಳನ್ನು ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ವಿಭಿನ್ನವಾದ ಬೆಂಬಲ ನೀಡಬೇಕು. ಇದಕ್ಕಾಗಿ ಎಲ್ಲರೂ ಪಕ್ಷಭೇದ ಮರೆತು ಪ್ರಯತ್ನ ಮಾಡಬೇಕು ಎಂದರು.

ಪ್ಯಾಬ್ರಿಕೇಶನ್ ಕಂಪನಿಯೊಂದರ ಸ್ಥಾಪನೆಗೆ ಮೈಸೂರಲ್ಲಿ ಜಾಗ ನೋಡಲಾಗುತ್ತಿದೆ. ಹೊಸ ಕಂಪನಿಗಳು ರಾಜ್ಯಕ್ಕೆ ಬರುವಾಗ ಉತ್ತರ ಕರ್ನಾಟಕ ಭಾಗವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಈ ಭಾಗದಲ್ಲಿ ಇನ್ಫೋಸಿಸ್ ಬಂದ ಮೇಲೆ ನಿರುದ್ಯೋಗ ನಿವಾರಣೆಯಲ್ಲಿ ದೊಡ್ಡ ಬದಲಾವಣೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ, ನಿರೀೆ ಹುಸಿಯಾಗಿದೆ. ಈ ಭಾಗದಲ್ಲಿ ಇಂಜಿನಿಯರಿಂಗ್ ಓದಿದವರು ಬಹಳಷ್ಟಿದ್ದಾರೆ. ಅವರಿಕೆ ಅವಕಾಶ ಸಿಗಬೇಕು. ಐಟಿ ಪಾರ್ಕ್ ಖಾಲಿ ಬಿದ್ದಿದೆ. ಈ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದ್ವೀತಿಯ ಸ್ತರದ ನಗರಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಇನ್ಫೋಸಿಸ್ ಕಂಪನಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕು. ಇದರ ಜತೆಗೆ ಹೊಸತನ್ನು ಹುಬ್ಬಳ್ಳಿಗೆ ಪರಿಚಯಿಸಬೇಕು ಎಂದರು. ಒಟ್ಟಾರೆ ಎಲ್ಲ ಶಾಸಕರು ಪಕ್ಷಭೇದ ಮರೆತು ಸಚಿವರಿಗೆ ಮನವಿ ಮಾಡಿದ್ದು ವಿಶೇಷವಾಗಿತ್ತು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಧೂಳುಮಯ ಹುಬ್ಬಳ್ಳಿಯ ಚಿತ್ರಣ ಬದಲಾಗಬೇಕು. ಎಲ್ಲ ಕಡೆ ಅಭಿವೃದ್ಧಿಯಾದರೂ ಇಲ್ಲಿ ಆಗುತ್ತಿಲ್ಲ. ಫ್ಲೈಓವರ್ ಗಿಂತ ಮೊದಲು ಉತ್ತಮ ರಸ್ತೆಗಳ ಅವಶ್ಯಕತೆ ಇತ್ತು ಎಂದು ಪ್ರತಿಪಾದಿಸಿದರು.

ಟೈ ಹುಬ್ಬಳ್ಳಿ ಅಧ್ಯಕ್ಷ ಡಾ. ವಿವೇಕ ಪಾಟೀಲ ಸ್ವಾಗತಿಸಿದರು. ಶ್ರೀದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ ಎಂಡಿ ವೀರೇಶ ಉಂಡಿ, ಸ್ವರ್ಣ ಸಮೂಹ ಸಂಸ್ಥೆಗಳ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಶಶಿಧರ ಶೆಟ್ಟರ, ನಾಗರಾಜ ಕೊಟಗಿ, ಸಂದೀಪ ಬಿಡಸಾರಿಯಾ, ವಿಶಾಲ ನಾಡಗೌಡ ಇತರರು ಪಾಲ್ಗೊಂಡಿದ್ದರು.