ಜಿಲ್ಲೆ

ಕಾನೂನಿಗೆ ತಲೆಭಾಗದವರ ಹೆಡೆಮುರಿ ಕಟ್ಟಿ

ಶಿರಸಿ: ಕಾನೂನಿಗೆ ತಲೆಭಾಗದವರನ್ನು ಹೆಡೆಮುರಿ ಕಟ್ಟಿ, ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ಪ್ರತಿ ಪೊಲೀಸ್ ಸಿಬ್ಬಂದಿಯ ಜವಾಬ್ದಾರಿ. ಸಾರ್ವಜನಿಕರ ಮಾನ, ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಹೇಳಿದರು.

ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಶಿರಸಿ ಉಪವಿಭಾಗದ ಕವಾಯತು ಪರಿವೀಕ್ಷಣೆ ಬಳಿಕ ಅವರು ಮಾತನಾಡಿದರು. ಜಿಲ್ಲಾ ಕೇಂದ್ರ ಕಾರವಾರದಲ್ಲಿರುವುದು ಮತ್ತು ಜಿಲ್ಲೆ ಭೌಗೋಳಿಕವಾಗಿ ವಿಸ್ತಾರವಾಗಿರುವುದರಿಂದ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. ಪ್ರತಿ ಸಿಬ್ಬಂದಿ ಇಲಾಖೆಗೆ ಸೇರಿದಾಗಿನಿಂದ ನಿವೃತ್ತಿಯವರೆಗೆ ದೇಹ ಮತ್ತು ಮನಸನ್ನು ಕರ್ತವ್ಯಕ್ಕೆ ಮೀಸಲಿಡಬೇಕು. ನಮ್ಮ ಪ್ರತಿ ನಡತೆಯನ್ನೂ ಜನತೆ ವೀಕ್ಷಿಸುತ್ತಿರುತ್ತಾರೆ ಎಂದರು.

ಬನವಾಸಿ ಢಕಾಯಿತಿ ಪ್ರಕರಣ ನಡೆದ ಕೆಲ ಘಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ನಡೆಯುತ್ತಿವೆ. ಇದುವರೆಗೆ ಶಿರಸಿ ಉಪ ವಿಭಾಗದಲ್ಲಿಯೇ 15ಕ್ಕೂ ಅಧಿಕ ಗಾಂಜಾ ಸಾಗಾಟದ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಗಾಂಜಾ ಸಾಗಾಟದ ವಿಷಯದ ಕುರಿತು ಪೊಲೀಸ್ ಸಿಬ್ಬಂದಿ ಇನ್ನಷ್ಟು ಚುರುಕಾಗಿ ಕಾರ್ಯ ನಿರ್ವಹಿಸಬೇಕಿದೆ. ಸಮಾಜ ಘಾತುಕ ಶಕ್ತಿಗಳಿಗೆ ಸಂದೇಶ ನೀಡಬೇಕಿದೆ ಎಂದರು.

ಪ್ರತಿ ಪೊಲೀಸ್ ಠಾಣೆಯಲ್ಲಿ ಅಲ್ಲಿಯ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಯಾವುದೇ ಆದೇಶಕ್ಕೆ ಕಾಯದೇ ಸಮಾಜಘಾತುಕ ಶಕ್ತಿಗಳನ್ನು ಅಡಗಿಸಬೇಕು. ಸಾಮಾನ್ಯ ಜನರ ಮಾನ, ಪ್ರಾಣ ಕಾಪಾಡುವ ಕಾರ್ಯ ನಮ್ಮ ಪ್ರಮುಖ ಜವಾಬ್ದಾರಿ. ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಪ್ರಬಲಗೊಳಿಸಿ ಜನಸಾಮಾನ್ಯರ ನೆರವಿಗೆ ನಿಲ್ಲಬೇಕು. ಪ್ರತಿ ಪೊಲೀಸ್ ಠಾಣೆಯಲ್ಲಿಯೂ ಸಿಬ್ಬಂದಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಪೋಕ್ಸೋ ಕುರಿತು ಜಾಗೃತಿ ಮೂಡಿಸಬೇಕು. ಕಾನೂನಿಗೆ ತಲೆಬಾಗದವನ್ನು ಹೆಡೆಮುರಿ ಕಟ್ಟಿ ಶಿಕ್ಷೆ ಆಗುವ ರೀತಿ ನೋಡಿಕೊಳ್ಳಬೇಕು. ಠಾಣೆಗೆ ಬಂದವರನ್ನು ಕಾಯಿಸುವ ಮತ್ತು ಯಾವುದೇ ಪ್ರಕರಣದಲ್ಲಿ ರಾಜಕೀಯ ದುರುದ್ದೇಶದೊಂದಿಗೆ ಕಾರ್ಯ ನಿರ್ವಹಿಸಬಾರದು ಎಂದ ಅವರು, ಶಿರಸಿಗೆ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾಗಿದ್ದು, ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದರು. ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ, ಡಾ. ವೆಂಕಟ್ರಮಣ ಹೆಗಡೆ, ಡಿವೈಎಸ್ಪಿ ಗಣೇಶ ಕೆ.ಎಲ್., ಸಿಪಿಐ ಶಶಿಕಾಂತ ವರ್ವ ಇತರರಿದ್ದರು.