ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ರದ್ದಾದ ರೈಲುಗಳಲ್ಲ ಪ್ರಯಾಣಿಸಲು ಟಿಕೆಟ್ ಪಡೆದಿದ್ದವರಿಗೆ ಹಣ ಮರುಪಾವತಿಸಲು ನೈಋತ್ಯ ರೈಲ್ವೆ ಅಧಿಕಾರಿಗಳು ಮುಂದಾಗಿದ್ದು, ಅದಕ್ಕಾಗಿ 9 ನಿಲ್ದಾಣಗಳಲ್ಲಿ ಕೇಂದ್ರಗಳನ್ನು ತೆರೆದಿದ್ದಾರೆ.
ಕರೊನಾ ಭೀತಿಯಿಂದಾಗಿ ಮಾ. 24ರಿಂದ ದೇಶವ್ಯಾಪಿ ಲಾಕ್ಡೌನ್ ಮಾಡಲಾಗಿದೆ. ಅದರಿಂದಾಗಿ ರೈಲು ಸಂಚಾರ ರದ್ದಾಗುವಂತಾಗಿತ್ತು. ಆದರೆ, ಅದಕ್ಕೂ ಮುನ್ನ ರೈಲಿನಲ್ಲಿ ಪ್ರಯಾಣಿಕರು ಸಾವಿರಾರು ಜನರು ಟಿಕೆಟ್ ಖರೀದಿಸಿದ್ದರು. ರದ್ದಾದ ರೈಲುಗಳಲ್ಲಿ ಸಂಚರಿಸಲು ಟಿಕೆಟ್ ಖರೀದಿಸಿದವರಿಗೆ ಹಣ ವಾಪಸ್ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಅದಕ್ಕಾಗಿ ಕೆಎಸ್ಆರ್ ಬೆಂಗಳೂರು ನಗರ ನಿಲ್ದಾಣ, ಬೆಂಗಳೂರು ದಂಡು, ಯಶವಂತಪುರ, ಕೆ.ಆರ್. ಪುರ, ಕೆಂಗೇರಿ, ಮಂಡ್ಯ, ತುಮಕೂರು ಮತ್ತು ಹೊಸೂರು ನಿಲ್ದಾಣಗಳ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ಗಳಲ್ಲಿ ಹಣ ವಾಪಸ್ ಪಡೆಯಬಹುದು.
ಇದನ್ನೂ ಓದಿ: ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ
ವಾರದ ದಿನಗಳಲ್ಲಿ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಹಾಗೂ ಭಾನುವಾರ ಮತ್ತು ರಜಾದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಟಿಕೆಟ್ ಹಣ ವಾಪಸ್ ಪಡೆಯಲು ಸಮಯ ನಿಗದಿ ಮಾಡಲಾಗಿದೆ. ಜು.31ರೊಳಗೆ ಹಣ ನಿಗದಿತ ಕೌಂಟರ್ಗಳಲ್ಲಿ ಹಣ ಪಡೆಯುವಂತೆ ಅಧಿಕಾರಿಗಳು ತಿಳಿಸಿದ್ದಾರೆ.