ಜಿಲ್ಲೆ

ಟಿಬೆಟಿಯನ್ ಶಾಲೆಯಲ್ಲಿ ಕನ್ನಡದ ಕಲರವ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಬೈಲಕುಪ್ಪೆ ಟಿಬೆಟ್ ನಿರಾಶ್ರಿತರ ಕೇಂದ್ರದಲ್ಲಿರುವ ಟಿ.ಸಿ.ವಿ. ಶಾಲೆಯಲ್ಲಿ ವಿಶೇಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಎಂ.ಕೆ. ದಿನೇಶ್ ಮಾತಾನಾಡಿ ಮಾತೃ ಭಾಷೆ ಯಾವುದೇ ಇರಲಿ ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡದವರು ಎಂಬ ಹೆಮ್ಮೆ ನಮಗಿದೆ. ಹಲವಾರು ಕಾರಣಗಳಿಂದ ಟಿಬೆಟ್ ದೇಶದಿಂದ ಬಂದು ನಮ್ಮ ನೆಲದಲ್ಲಿ ಬದುಕು ಕಟ್ಟಿಗೊಂಡಿರುವವರು ಸಹ ಕನ್ನಡ ಕಲಿತು, ಕನ್ನಡ ಭೂಮಿಯನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಪರ ಸಂಘ ಸಂಸ್ಥೆಗಳು ಸಹಕರಿಸಬೇಕು.

ಪಠ್ಯ ವಿಷಯ ಯಾವುದೇ ಇರಲಿ ವಾರಕ್ಕೊಮ್ಮೆಯಾದರೂ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವುದರಿಂದ ಇತರರೊಂದಿಗೆ ಬೆರತು ಬದುಕನ್ನು ಸಾಧಿಸಲು ಅನುಕೂಲವಾಗುವುದು ಎಂದರು.

ದಿನದ ಮಹತ್ವದ ಬಗ್ಗೆ ಮಾತಾನಾಡಿದ ಕನ್ನಡ ಜಾಗೃತಿ ಸಮಿತಿ ಸದಸ್ಯ ಬಿ.ಎಸ್ ಲೋಕೇಶ್ ಸಾಗರ್ ವಿಶ್ವದಲ್ಲಿ ಕನ್ನಡ ನುಡಿ, ಮತ್ತು ಅಕ್ಷರಗಳಿಗೆ ವಿಶೇಷ ಮಾನ್ಯತೆ ಇದೆ. ದೇಶದಲ್ಲಿಯೂ ಅತಿ ಉನ್ನತ ಪದವಾದ ರಾಷ್ಟಪತಿ ಎಂಬ ಪದವನ್ನು ಸಹ ಕನ್ನಡದ ಸಾಹಿತಿ ತಿ.ನಂ.ಶ್ರೀ. ನೀಡುವುದರ ಮುಖಾಂತರ ರಾಷ್ಟ್ರದ ಮೊದಲ ಪ್ರಜೆಯ ನಾಮಾಂಕಿತ ಸ್ಥಾನವನ್ನು ನಿರ್ಣಯಿಸಿರುವ ಹೆಮ್ಮೆ ಕನ್ನಡಿಗದನಾಗಿದೆ. ಹಲವಾರು ಮಾತೃಭಾಷಿಗರನ್ನು ಹೊಂದಿರುವ ಅಪರೂಪದ ರಾಜ್ಯ ಕರ್ನಾಟಕವಾಗಿದ್ದು, ಇಲ್ಲಿನ ಕನ್ನಡಿಗರ ಹೃದಯ ವೈಶಾಲತೆ ಮೃದುವಾಗಿರುವ ಕಾರಣ ಕೆಲವೊಮ್ಮೆ ನಾಡು ನುಡಿಗೆ ಧಕ್ಕೆ ಬಂದಾಗ ರಕ್ಷಣೆಗೆ ಕನ್ನಡ ಪರ ಸಂಘಟನೆಗಳು ಅನಿರ್ವಾಯವಾಗಿವೆ ಎಂದು ಹೇಳಿದರು.

ಬೌದ್ಧ ಗುರು ಟುಪ್ಟೆನ್ ನಾಮ್ಗ್ಯಾಲ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ. ಸಿ. ವಿ. ಶಾಲಾ ನಿರ್ದೇಶಕ ತ್ಸೆರಿಂಗ್ ದೊರ್ಜೆ ವಹಿಸಿದ್ದರು. ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ, ಶಾಲಾ ಪ್ರಾಂಶುಪಾಲ ನಾಮ್ಗ್ಯಾಲ್ ತ್ಸೆರಿಂಗ್, ಕುಶಾಲನಗರ ತಾಲೂಕು ಕ.ರ.ವೇ ಅಧ್ಯಕ್ಷ ಅಣ್ಣಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ, ಪದಾಧಿಕಾರಿಗಳಾದ ಅನಂದಗೌಡ, ಯೋಗೇಶ್, ಶಿಕ್ಷಕ ಭಾನು ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ಪ್ರದರ್ಶಿಸಿದ ಸಾಂಸ್ಕೃತಿಕ ವೈವಿಧ್ಯ ಗಮನ ಸೆಳೆಯಿತು.