ಜಿಲ್ಲೆ

ಭಟ್ಕಳದಲ್ಲಿ ಬಿರುಸು ಪಡೆದ ಮಳೆರಾಯ

ಬಸವರಾಜ ವೀರಪ್ಪ ಗರಗ

ಭಟ್ಕಳ: ಮಳೆಗಾಲ ಆರಂಭವಾಗಿ 15 ದಿನ ಕಳೆದ ಬಳಿಕ ತಾಲೂಕಿನಾದ್ಯಂತ ಮಳೆ ಬಿರುಸು ಪಡೆದುಕೊಂಡಿದ್ದು, ಗುರುವಾರ ಬೆಳಗ್ಗೆಯಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣವಿದ್ದು, ಮೊದಲ ಬಾರಿಗೆ ಸೆಕೆಯ ಪ್ರಭಾವ ಕಡಿಮೆಯಾಗಿದೆ.

ಜೂ. 6ರಿಂದ ಮಳೆಯಾಗುತ್ತದೆ ಎಂದು ಜನರು, ಕೃಷಿಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಹಿಂದೆಂದೂ ಕಾಣದ ನೀರಿನ ಅಭಾವಕ್ಕೂ ಭಟ್ಕಳ ತುತ್ತಾಗಿದ್ದು, ಎಲ್ಲರೂ ಮಳೆಗಾಗಿ ದೇವರ ಮೊರೆ ಹೋಗಿದ್ದರು. ಆದರೆ, ಮಳೆ ಆರಂಭವಾಗಿ 15 ದಿನಗಳು ಕಳೆದರೂ ಸರಿಯಾಗಿ ಮಳೆ ಆಗಿರಲಿಲ್ಲ. ಇದರಿಂದ ಜನರು ಕುಡಿಯಲು ನೀರಿನ ಟ್ಯಾಂಕರ್​ಗಳನ್ನು ಅವಲಂಬಿಸಿದ್ದರು. ಆದರೆ, ಗುರುವಾರ ವಾತಾವರಣ ಬದಲಾಗಿದ್ದು, ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಬೆಳಗ್ಗೆಯಿಂದಲೆ ಮೋಡ ಕವಿದ ವಾತಾವರಣವಿದ್ದು ಮಳೆಗಾಲದ ಅನುಭವ ನೀಡಿದೆ.

ಇನ್ನೂ ಪೂರ್ತಿಗೊಳ್ಳದ ಚರಂಡಿ ಕಾಮಗಾರಿ

ಮಳೆಗಾಲದ ಪೂರ್ವ ತಯಾರಿಯಾಗಿ ಪುರಸಭೆ ಅಲ್ಲಲ್ಲಿ ಚರಂಡಿ ಹೂಳೆತ್ತುವ ಕಾರ್ಯವೆನೋ ಆರಂಭಿಸಿದೆ. ಆದರೆ, ಹೂಳು ತೆಗೆದ ಬಳಿಕ ಚರಂಡಿಯ ಬಳಿಯ ತಾಜ್ಯವನ್ನು ಬಿಟ್ಟು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇದರಿಂದ ಜನರಿಗೆ ಸಂಚಾರಕ್ಕೆ ತೊಂದರೆ ಒಂದೆಡೆಯಾದರೆ, ಚರಂಡಿಯಿಂದ ತೆಗೆದ ತಾಜ್ಯ, ಹೂಳು ಮತ್ತೆ ಚರಂಡಿ ಸೇರುತ್ತಿದೆ. ಹೆದ್ದಾರಿ ಬದಿಯಲ್ಲೂ ಐಆರ್​ಬಿ ಸಂಸ್ಥೆಯ ಅವಾಂತರದಿಂದ ರಸ್ತೆಯ ನೀರು ಹೆದ್ದಾರಿ ಬದಿಯ ಮನೆಗಳಿಗೆ ನುಗ್ಗುತ್ತಿದೆ. ಅಪೂರ್ಣ ಕಾಮಗಾರಿಗಳು, ಸರಿಯಾಗಿ ನೀರು ಹೋಗಲು ವ್ಯವಸ್ಥೆ ಕಲ್ಪಿಸದಿರುವುದು ಹೋದ ವರ್ಷದ ಆಗಸ್ಟ್​ನಲ್ಲಿ ಪ್ರವಾಹದ ಭೀತಿ ಮತ್ತೆ ಜನರನ್ನು ಕಾಡುತ್ತಿದೆ. ಮಳೆ ಸುರಿಯುತ್ತಿರುವಂತೆ ಹೂಳು ತೆಗೆಯಲು ಮುಂದಾದ ಪುರಸಭೆಯಿಂದ ಹೆದ್ದಾರಿ ಬದಿಯಲ್ಲಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.