ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆ ಮಂಗಳವಾರ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಮೂಲ್ಕಿ ವ್ಯಾಪ್ತಿಯ ಹಳೆಯಂಗಡಿಯಲ್ಲಿ ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.
ಉಡುಪಿಯಲ್ಲಿ ಸಾಯಂಕಾಲ 4 ಗಂಟೆ ವೇಳೆಗೆ ನಗರದ ಸುತ್ತಮುತ್ತ ಸಿಡಿಲಿನ ಆರ್ಭಟದೊಂದಿಗೆ ಆರಂಭಗೊಂಡ ಮಳೆ ಸಾಯಂಕಾಲ 6 ಗಂಟೆವರೆಗೂ ನಿರಂತರ ಸುರಿದಿದೆ. ಪಡುಬಿದ್ರಿ, ಹೆಬ್ರಿ, ಬ್ರಹ್ಮಾವರ, ಬಾರ್ಕೂರು, ಕಟಪಾಡಿ, ಕಾಪು, ಆರ್ಡಿ, ಶೇಡಿಮನೆ, ಕಾರ್ಕಳ, ಬೆಳ್ಮಣ್, ನಿಟ್ಟೆ, ಕೋಟ, ಗಂಗೊಳ್ಳಿ, ಪೆರ್ಡೂರು, ಹಿರಿಯಡ್ಕ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿದಿದ್ದು, ದಿಢೀರ್ ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ಹಲವೆಡೆ ಮರ ಬಿದ್ದಿದ್ದು, ಮನೆ, ಸಂಗಡಿಗಳಿಗೆ ಹಾನಿಯಾಗಿದೆ. ತಂತಿ ಕಡಿದು, ವಿದ್ಯುತ್ ವ್ಯತ್ಯಯವಾಗಿದೆ.
ದ.ಕ.ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಬಳಿಕ ಜಿಲ್ಲೆಯ ವಿವಿಧೆಡೆ ಮಳೆ ಆರಂಭವಾಗಿದೆ. ಅರಿಯಡ್ಕದಲ್ಲಿ 70 ಮಿ.ಮೀ, ನೆಲ್ಲಿಕಾರು 36 ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಬೆಳ್ತಂಗಡಿ ಮತ್ತು ಮೂಡುಬಿದಿರೆ ತಾಲೂಕಿನ ಶಿರ್ಲಾಲು, ನೆರಿಯ, ನಾವೂರು, ಚಾರ್ಮಾಡಿ, ಕಡಿರುದ್ಯಾವರ, ನಾರಾವಿ, ಕಲ್ಲಮುಂಡ್ಕೂರು, ವಾಲ್ಪಾಡಿ ಮೊದಲಾದೆಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರು ಹೊರವಲಯದ ಮೂಲ್ಕಿ, ಪಡುಪಣಂಬೂರು, ಸುರತ್ಕಲ್ ಮೊದಲಾದೆಡೆ ಸಾಮಾನ್ಯ ಮಳೆಯಾಗಿದೆ. ದಿನದ ಗರಿಷ್ಠ ತಾಪಮಾನ 32.9 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆ ಮುಂದಿನ ಕೆಲವು ದಿನ ಮುಂದುವರಿಯಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಆಸ್ಪತ್ರೆ ಸೇರಿದ ಚಿಣ್ಣರು: ಹಳೆಯಂಗಡಿಯ ಇಂದಿರಾನಗರದ ಬೊಳ್ಳೂರು ಮಸೀದಿ ಹಿಂಬದಿಯ ಮನೆ ಸಮೀಪ ಆಡುತ್ತಿದ್ದ ಮನ್ಸೂರ್ ಎಂಬುವರ ಪುತ್ರ ನಿಹಾನ್(5), ಗಂಗಾವತಿ ಮೂಲದ ದುರ್ಗಪ್ಪ ಎಂಬುವರ ಮಗ ಮಾರುತಿ (6)ಅವರಿಗೆ ಮಂಗಳವಾರ ಸಾಯಂಕಾಲ ಸಿಡಿಲು ಬಡಿದಿದೆ. ಇಬ್ಬರನ್ನೂ ಗಂಭೀರ ಸ್ಥಿತಿಯಲ್ಲಿ ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲ ಆಘಾತದಿಂದ ಮೂರ್ಛೆ ತಪ್ಪಿದ್ದರು ಎನ್ನಲಾಗಿದೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ತಂಡ ಮಕ್ಕಳಿಗೆ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಿ ಚಿಕಿತ್ಸೆ ನೀಡುತ್ತಿದೆ.