ಮಂಗಳೂರು: ತುಂಬೆಯಿಂದ ನೀರಿನ ಪೂರೈಕೆ ನಿರಂತರವಾಗಿದ್ದರೂ ಮಂಗಳೂರು ನಗರದ ಹಲವು ಕಡೆಗಳಲ್ಲಿ ನೀರಿನ ಅಭಾವ ಮತ್ತಷ್ಟು ಕಾಣಿಸಿಕೊಂಡಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಹೆಚ್ಚಳಗೊಂಡಿದ್ದು, ರಸ್ತೆಯಲ್ಲಿ ನೀರು ಸಾಗಾಟದ ಟ್ಯಾಂಕರ್‌ಗಳ ಬಿರುಸಿನ ಓಡಾಡ ಕಂಡು ಬರುತ್ತಿದೆ.
ತುಂಬೆ ಅಣೆಕಟ್ಟಿನ ನೀರಿನ ಮಟ್ಟ ಶುಕ್ರವಾರ 0.04 ಮೀಟರ್ ಇಳಿಕೆಯಾಗಿ 5.07 ಮೀ.ಗೆ, ಎಎಂಆರ್ ಅಣೆಕಟ್ಟಿನ ನೀರಿನ ಮಟ್ಟ 08 ಮೀ. ಕಡಿಮೆಯಾಗಿ 17.10ಕ್ಕೆ ತಲುಪಿದೆ. ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾಗದಂತೆ ಕಾಯ್ದುಕೊಳ್ಳಲು ಹರೇಕಳ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿಗೆ ಪಂಪಿಂಗ್ ಮಾಡಲಾಗುತ್ತಿದೆ. ಆದರೂ ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಕೆಯಾಗುತ್ತಿರುವುದು ಆತಂಕ ಉಂಟು ಮಾಡಿದೆ.
ತುಂಬೆಯಿಂದ ಪ್ರತಿದಿನ 155 ಎಂಎಲ್‌ಡಿ ನೀರು ಲಿಫ್ಟ್ ಮಾಡಿ ಕುಡಿಯುವ ನೀರಿನ ಪೂರೈಕೆ ನಿರಂತರ ನಡೆಯುತ್ತಿದೆ. ಸದ್ಯಕ್ಕೆ ಇಲ್ಲಿರುವ ನೀರು ಮುಂದಿನ 45 ದಿನಕ್ಕೆ ಮಾತ್ರ ಪೂರೈಸಬಹುದಾಗಿರುವುದರಿಂದ ಮಂಗಳೂರು ಪಾಲಿಕೆ ನೀರಿನ ರೇಷನಿಂಗ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್, ಪಾಂಡೇಶ್ವರ ಸಹಿತ ಪೈಪ್‌ಲೈನ್‌ನಿಂದ ನೀರು ತಲುಪದ ಕೆಲವು ಪ್ರದೇಶಗಳಿಗೆ ಪ್ರತಿನಿತ್ಯ 70 ಟ್ಯಾಂಕರ್ (7 ಟ್ಯಾಂಕರ್‌ಗಳಲ್ಲಿ ಟ್ರಿಪ್‌ಗಳಲ್ಲಿ ) ನೀರು ಪಾಲಿಕೆಯಿಂದ ಪೂರೈಕೆಯಾಗುತ್ತಿದೆ. ಉಳ್ಳಾಲ ಗ್ರಾಮೀಣ ಭಾಗದ ತೊಕ್ಕೊಟ್ಟು, ಬಾಳೆಪುಣಿ, ಕೊಣಾಜೆ, ನರಿಂಗಾನ, ಪಜೀರು, ಮಂಜನಾಡಿ, ಇನೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 9 ಟ್ಯಾಂಕರ್‌ಗಳ ಮೂಲಕ ದಿನಕ್ಕೆ 30 ಟ್ರಿಪ್ ಸಹಿತ 20 ಹೆಚ್ಚುವರಿ ನೀರು ಪೂರೈಕೆಯಾಗುತ್ತಿದೆ. ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿ ನಗರ ಭಾಗದ 12 ವಾರ್ಡ್‌ಗಳಿಗೆ 10 ಟ್ಯಾಂಕರ್‌ಗಳ ಮೂಲಕ 62 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ.