ಜಿಲ್ಲೆ

ರಾಜಣ್ಣ ತೇಜೋವಧೆಗೆ ಅವಕಾಶ ನೀಡಲ್ಲ: ಕ್ಷಮೆ ಕೇಳಿದ ನಂತರವೂ ವಿವಾದಕ್ಕೆ ಕಿಡಿ

Tumakuru

ತುಮಕೂರು: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಬಗ್ಗೆ ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್​.ರಾಜಣ್ಣ ನೀಡಿದ್ದ ಹೇಳಿಕೆ ವಿವಾದ ಭುಗಿಲೆದ್ದಿದ್ದು ರಾಜಣ್ಣ ವಿರುದ್ಧ ಪ್ರತಿಭಟನೆಗೆ ವಿರುದ್ಧವಾಗಿ ಅಹಿಂದ ಅಸ ಪ್ರಯೋಗಿಸಲಾಗಿದೆ.


ನಗರದಲ್ಲಿ ಭಾನುವಾರ ಕೆ.ಎನ್​.ರಾಜಣ್ಣ ಬೆಂಬಲಿತ ಅಹಿಂದ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದು, ಅಹಿಂದ ವರ್ಗದ ಶಕ್ತಿಯಾಗಿರುವ ರಾಜಣ್ಣ ಅವರ ತೇಜೋವಧೆಗೆ ಅವಕಾಶ ನೀಡುವುದಿಲ್ಲ, ಕ್ಷಮೆ ಕೇಳಿದ ನಂತರವೂ ವಿವಾದವನ್ನು ದೊಡ್ಡದು ಮಾಡಿಕೊಂಡು ಹೋರಾಟ ಮಾಡಿದರೆ ನಾವೂ ಕೂಡ ಅಂಥವರ ವಿರುದ್ಧ ಹೋರಾಟ ಮಾಡುತ್ತೇವೆ ಎಂಬ ಸಂದೇಶ ರವಾನಿಸಿದರು.


ಮುಖಂಡ ಧನಿಯಾಕುಮಾರ್​ ಮಾತನಾಡಿ, ದೇವೇಗೌಡರ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಕೆ.ಎನ್​.ರಾಜಣ್ಣ ಸ್ಪಷ್ಟನೆ ನೀಡಿದ್ದರೂ ಕೆಲವರು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.


ತಳ ಸಮುದಾಯದ ವ್ಯಕ್ತಿಗಳು ಅಧಿಕಾರಕ್ಕೆ ಬಂದರೆ ಇಂತಹ ಅಪಪ್ರಚಾರ ಸಾಮಾನ್ಯ ಎನಿಸಿದೆ, ಜೆಡಿಎಸ್​ ಮುಖಂಡರು ರಾಜಣ್ಣ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಆದರೆ, ರಾಜಣ್ಣ ಪರವಾಗಿ ಅಹಿಂದ ಸಮುದಾಯವಿದೆ ಎಂದರು.


ಡಿಸಿಸಿ ಬ್ಯಾಂಕ್​ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್​ ಮಾತನಾಡಿ, ರಾಜಣ್ಣ ಅವರು ಮಾತಿನ ಭರದಲ್ಲಿ ನೀಡಿದ್ದ ಹೇಳಿಕೆ ಬಳಸಿಕೊಂಡು ಅವರ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ದೇವೇಗೌಡ, ರೇವಣ್ಣ, ಕುಮಾರಸ್ವಾಮಿ ಕೂಡ ಸಾಕಷ್ಟು ಸಲ ಅವಹೇಳನಕಾರಿಯಾಗಿ ಮಾತನಾಡಿದ ಉದಾಹರಣೆಯಿದೆ. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.


ಜಾತ್ಯತಿತ ಮಾನವ ವೇದಿಕೆಯ ಅಂಜಿನಪ್ಪ, ಮಾತನಾಡಿ, ಸಾರ್ವಜನಿಕವಾಗಿ ಮೆ ಕೇಳಿದ ನಂತರವೂ ವ್ಯಕ್ತಿಯ ತೇಜೋವಧೆ ನಡೆಯುತ್ತಿದೆ ಎಂದರು.
ದಲಿತ ಮುಖಂಡ ಕೊಟ್ಟ ಶಂಕರ್​ ಮಾತನಾಡಿ, ಅಹಿಂದ ಮುಖಂಡರು ಸಮಾಜದಲ್ಲಿ ಸಾಮರಸ್ಯವಿರಲಿ ಎಂಬ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸಿದ್ದೇವೆ, ಯಾವುದೇ ಸಮುದಾಯದ, ಪದ ವಿರುದ್ಧವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮುಖಂಡರಾದ ಗೋಪಾಲ್​, ಜಯರಾಮ್​, ರೇಣುಕಯ್ಯ ಸೇರಿ 50ಕ್ಕೂ ಹೆಚ್ಚು ಮುಖಂಡರು ಇದ್ದರು.

ರಾಜಣ್ಣ ಬೆಂಬಲಕ್ಕೆ ಒಕ್ಕಲಿಗ ಮುಖಂಡರು
ಕೆ.ಎನ್​.ರಾಜಣ್ಣ ಅವರು ಕ್ಷಮೆ ಕೇಳಿದ ನಂತರವೂ ವಿವಾದವನ್ನು ದೊಡ್ಡದು ಮಾಡಲಾಗುತ್ತಿರುವ ಬಗ್ಗೆ ಕೆಲವು ಒಕ್ಕಲಿಗ ಮುಖಂಡರು ಭಾನುವಾರ ಸುದ್ದಿಗೊಷ್ಠಿ ನಡೆಸಿ ಆಕ್ಷೇಪಿಸಿದರು. ಬಯಲುಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ಮೂರ್ತಿ, ನಾಗೇಶ್​ಬಾಬು ಮತ್ತಿತರರ ಮುಖಂಡರು ರಾಜಣ್ಣ ಬೆಂಬಲಕ್ಕಿದ್ದೇವೆ ಎಂದರು. ದೇವರಾಜು ಮಾತನಾಡಿ, ಪ್ರಜ್ವಲ್​ ರೇವಣ್ಣ ಹಿರಿಯರೆಂಬುದನ್ನು ಮರೆತು ಅವಹೇಳನ ಮಾಡಿದ್ದಾರೆ, ಅವರಿಗೂ ನಾವು ಅದೇ ಕೆಲಸವನ್ನು ಮಾಡಬೇಕಾಗುತ್ತದೆ. ಕೂಡಲೇ ಅವರ ಅವಹೇಳನಕಾರಿ ಮಾತು ವಾಪಸ್​ ಪಡೆಯಬೇಕು ಎಂದು ಆಗ್ರಹಿಸುತ್ತೇವೆ ಎಂದರು.

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ನಮ್ಮ ನಾಯಕ ಕೆ.ಎನ್​.ರಾಜಣ್ಣ ಅವರನ್ನು ಹುಚ್ಚು ನಾಯಿಗೆ ಹೋಲಿಸಿ ನೀಡಿರುವ ಹೇಳಿಕೆಯನ್ನು ಕೂಡಲೇ ವಾಪಸ್​ ಪಡೆಯಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ಹೋರಾಟ ರೂಪಿಸಲಾಗುವುದು.

ಸಿಂಗದಹಳ್ಳಿ ರಾಜಕುಮಾರ್​ ಡಿಸಿಸಿ ಬ್ಯಾಂಕ್​ ನಿರ್ದೇಶಕ