ಕುವೈಟ್: ತುಳುಕೂಟ ಕುವೈಟ್ ನ 24ನೇ ವಾರ್ಷಿಕ ಮಹಾಸಭೆಯು ಸಾಲ್ಮಿಯಾ ಇಂಡಿಯನ್ ಸ್ಕೂಲ್ ಅಫ್ ಎಕ್ಸಲೆನ್ಸ್ ಸಭಾಂಗಣದಲ್ಲಿ ಜರುಗಿತು.
ಕುವೈಟ್ ಮತ್ತು ಭಾರತದ ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡ ಮಹಾಸಭೆಯನ್ನು ಆಡಳಿತ ಮಂಡಳಿ ಹಾಗೂ ಸಲಹಾ ಸಮಿತಿ ಸದಸ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತುಳುಕೂಟ ಕುವೈಟ್ ನ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಹರೀಶ್ ಭಂಡಾರಿ ವಾರ್ಷಿಕವರದಿ ಮತ್ತು ಕೋಶಾಧಿಕಾರಿ ರೋಷನ್ ಕ್ವಾರ್ಡಸ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 2023ನೇ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶದೊಂದಿಗೆ ತೇರ್ಗಡೆಗೊಂಡ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗು ಬಹುಮಾನ ನೀಡಲಾಯಿತು. ಮುಗ್ದಾ ಭಂಡಾರಿ ಪ್ರಾರ್ಥನೆ ಹಾಡಿದರು.
2024ನೇ ವರ್ಷದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರ ಹೆಸರನ್ನು ಚುನಾವಣಾಧಿಕಾರಿ ಸುಷ್ಮಾ ಬಂಗೇರ ಪ್ರಕಟಿಸಿದರು.
ಆಡಳಿತ ಮಂಡಳಿ-2024:
ಅಧ್ಯಕ್ಷ- ಅಬ್ದುಲ್ ರಜಾಕ್ ನಿಟ್ಟೆ, ಉಪಾಧ್ಯಕ್ಷ- ಶಂಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ- ಹರೀಶ್ ಭಂಡಾರಿ- ಜೊತೆ ಕಾರ್ಯದರ್ಶಿ- ಶರೋನ್ ಗೊನ್ಸಾಲ್ವಿಸ್, ಕೋಶಾಧಿಕಾರಿ- ರೋಷನ್ ಕ್ವಾರ್ಡಸ್, ಅಂತರಿಕ ಲೆಕ್ಕ ಪರಿಶೋಧಕ- ದಿನೇಶ್ ರಾಮ್ ಬನ್ನಂಜೆ, ಸಾಂಸ್ಕೃತಿಕ ಕಾರ್ಯದರ್ಶಿ- ವಿಜಯ್ ವಿಲ್ಸನ್ ಅಲ್ಬೂಕರ್ಕ್, ಕ್ರೀಡಾ ಕಾರ್ಯದರ್ಶಿ- ಶ್ರೀನಾಥ್ ಪ್ರಭು, ಕ್ಷೇಮಾಧಿಕಾರಿ- ವಿಜಯ್ ಕುಮಾರ್ ಕೈರಂಗಳ, ಸಾರ್ವಜನಿಕ ಸಂಪರ್ಕಾಧಿಕಾರಿ- ಲೈನಲ್ ಮಸ್ಕರೇನಸ್
ಅವಿರೋಧವಾಗಿ ಎರಡನೇ ಭಾರಿಗೆ ಆಯ್ಕೆಗೊಂಡ ಅಧ್ಯಕ್ಷ ಅಬ್ದುಲ್ ರಜಾಕ್ ನಿಟ್ಟೆ ಅವರು ಮಾತನಾಡಿ, ತುಳುಕೂಟ ಬೆಳ್ಳಿ ಹಬ್ಬದ ಈ ವರ್ಷದಲ್ಲಿ ಹೆಚ್ಚಿನ ಆರೋಗ್ಯ ಹಾಗು ಸಮಾಜಮುಖಿ ಕಾರ್ಯಕ್ರಮಗಳಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ತುಳು ಕೂಟ ಕುವೈಟ್ ನ 25ನೇ ವರ್ಷದ ಸ್ಮರಣಾರ್ಥ ನೂತನ ಲಾಂಛನ ಹಾಗು ಸಾಲ್ಮಿಯಾ ಕ್ಲಿನಿಕ್ ಪ್ರಾಯೋಜಕತ್ವದ ತುಳುಕೂಟದ ಹೊಸ ವರುಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಜ್ಯಾಕ್ಸನ್ ಡೇಸಾ ಹಾಗೂ ಡಾ.ಮನೋಹರ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಭಂಡಾರಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.