ಜಿಲ್ಲೆ

ಸತ್ಸಂಗದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ

ಪ್ರಶಾಂತ ಹೂಗಾರ

ತೆಲಸಂಗ: ಆಧ್ಯಾತ್ಮಿಕ ಬದುಕು ಮತ್ತು ಅವಿಭಕ್ತ ಕುಟುಂಬದ ಮೌಲ್ಯಗಳು ನಶಿಸುತ್ತಿವೆ. ಆದರೆ, ಸತ್ಸಂಗದಂತಹ ವೇದಿಕೆಗಳು ಮೌಲ್ಯಗಳನ್ನು ಪುನರುಜ್ಜೀವನಗೊಳಿಸಲು ಸಹಕಾರಿಯಾಗಿವೆ ಎಂದು ಕಕಮರಿ ಗುರುದೇವ ಆಶ್ರಮದ ಆತ್ಮಾರಾಮ ಸ್ವಾಮೀಜಿ ಹೇಳಿದರು.

ಸಮೀಪದ ಕನ್ನಾಳ ಗ್ರಾಮದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 50ನೇ ಸತ್ಸಂಗದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸತ್ಸಂಗದಂತಹ ಕಾರ್ಯಕ್ರಮಗಳಿಂದಲೆ ಎಲ್ಲರಲ್ಲಿ ಪ್ರೀತಿ, ಕರುಣೆ, ಸಹಾನುಭೂತಿ, ತ್ಯಾಗ ಚಿಗುರುತ್ತಿವೆ. ಸತ್ಸಂಗ ಧಾರ್ಮಿಕ ಚರ್ಚೆಗಳ ವೇದಿಕೆಯಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವ ಕೇಂದ್ರವಾಗಿದೆ ಎಂದರು.

ಹನಮಾಪುರದ ಅಮರೇಶ್ವರ ಸ್ವಾಮೀಜಿ ಮಾತನಾಡಿ, ಸತ್ಸಂಗಗಳು ಜನರಿಗೆ ಸರಿ ದಾರಿ ತೋರುತ್ತಿವೆ. ಕಳೆದ 50 ಸತ್ಸಂಗಗಳ ಮೂಲಕ ಕನ್ನಾಳ ಗ್ರಾಮಸ್ಥರು ಮೌಲ್ಯಗಳನ್ನು ಪುನರುತ್ಥಾನಗೊಳಿಸಲು ಶ್ರಮಿಸಿದ್ದಾರೆ ಎಂದರು.

ತುಂಗಳದ ಅನುಸೂಯಾದೇವಿ ಮಾತೋಶ್ರೀ ಮಾತನಾಡಿ, ಪಾಶ್ಚಾತ್ಯ ಪ್ರಭಾವದಿಂದ ಕ್ಷೀಣಿಸುತ್ತಿರುವ ನಮ್ಮ ಸಂಸ್ಕೃತಿ ಶ್ರೀಮಂತಿಕೆ ಉಳಿಸಿಕೊಳ್ಳಲು ಪೂರ್ವಜರ ಕೊಡುಗೆ ಯುವ ಪೀಳಿಗೆಗೆ ತಲುಪಿಸಬೇಕು ಎಂದರು.

ಹೊನವಾಡದ ಬಾಬುರಾವ ಮಹಾರಾಜರು, ಗೋಠೆಯ ಮಲ್ಲಿಕಾರ್ಜುನ ಶಾಸ್ತ್ರಿಗಳು, ವಿಜಯಪುರದ ಶಂಕರಾನಂದ ಸ್ವಾಮೀಜಿ, ಅಡಹಳಟ್ಟಿಯ ಭೀಮಾಶಂಕರ ಮಹಾರಾಜರು, ಸಾವಳಗಿಯ ಪುಟ್ಟುಮಹಾರಾಜರು, ಕಕಮರಿಯ ಅಣ್ಣಾಸಾಹೇಬ ಮಹಾರಾಜರು, ತೆಲಸಂಗದ ಸಂಗಮೇಶ ಸ್ವಾಮೀಜಿ ಇತರರಿದ್ದರು.