ಜಿಲ್ಲೆ

ಕಾಫಿ ನಾಡಲ್ಲಿ ಕರೊನಾ ಟೆಸ್ಟ್ ಲ್ಯಾಬ್ ಸೇವೆ ಆರಂಭ

Chikkamagaluru

ಚಿಕ್ಕಮಗಳೂರು: ಜಿಲ್ಲೆಯ ಬಹುನಿರೀಕ್ಷಿತ ಕರೊನಾ ಟೆಸ್ಟ್ ಲ್ಯಾಬ್ ಶನಿವಾರ ಕಾರ್ಯಾರಂಭ ಮಾಡಿತು. ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಆರ್​ಟಿಪಿಸಿಆರ್ ವೈರಾಲಜಿ ಪ್ರಯೋಗಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಉದ್ಘಾಟಿಸಿದರು.

ಪ್ರಯೋಗಾಲಯವು 1,48,62,000 ರೂ. ವೆಚ್ಚದಲ್ಲಿ ಸ್ಥಾಪನೆಯಾಗಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಕರೊನಾ ಫಲಿತಾಂಶ ಬೇಗ ದೊರೆಯಲಿದೆ. ಈ ಹಿಂದೆ ಜಿಲ್ಲೆಯಲ್ಲಿ 15 ದಿನಗಳಷ್ಟು ವಿಳಂಬವಾಗಿಯೂ ಫಲಿತಾಂಶ ಬಂದ ನಿದರ್ಶನಗಳಿದ್ದವು. ಲ್ಯಾಬ್​ನಲ್ಲಿ ಗಂಟಲ ದ್ರವ ಸಂಗ್ರಹಿಸಿದ 4 ಗಂಟೆಯಲ್ಲೇ ವರದಿ ಹೊರಬೀಳುತ್ತದೆ. ಹೆಚ್ಚೆಂದರೆ 12 ತಾಸಿನೊಳಗೆ ಫಲಿತಾಂಶ ಲಭ್ಯವಾಗಲಿದೆ. ಇನ್ನು ಹಾಸನ, ಶಿವಮೊಗ್ಗ, ಬೆಂಗಳೂರು ಲ್ಯಾಬ್​ಗೆ ಸ್ಯಾಂಪಲ್ ಕಳಿಸುವ ಅಗತ್ಯ ಇರುವುದಿಲ್ಲ.

ಐದು ವರ್ಷಗಳ ಕಾಲ ಗ್ಯಾರೆಂಟಿ ಇರುವ ಅತ್ಯುತ್ತಮವಾದ ಉಪಕರಣವನ್ನು ವಿದೇಶದಿಂದ ಆಮದು ಮಾಡಿಕೊಂಡು ಅಳವಡಿಸಲಾಗಿದೆ. ಪ್ರಯೋಗಾಲಯಕ್ಕೆ ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಲಾಗಿದ್ದು ಎರಡು ಶಿಫ್ಟ್​ಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿ ಅವರಿಗೆ ತರಬೇತಿ ನೀಡಿದಲ್ಲಿ ಮೂರು ಶಿಫ್ಟ್​ಗಳಲ್ಲೂ ಪ್ರಯೋಗಾಲಯವನ್ನು ಬಳಕೆ ಮಾಡಿಕೊಳ್ಳಬಹುದು. ನಿತ್ಯ ಒಂದು ಸಾವಿರದಿಂದ 1,200 ಫಲಿತಾಂಶ ಪಡೆಯಬಹುದಾಗಿದೆ.