ರಾಯಚೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸೇವಾದಳ ಜಿಲ್ಲಾ ಸಮಿತಿಯಿಂದ ರಾಷ್ಟ್ರಧ್ವಜ ಅಂಗೀಕಾರ ದಿನ ಆಚರಿಸಲಾಯಿತು.  
ಜಿಲ್ಲೆ

ತ್ರಿವರ್ಣ ಧ್ವಜದ ತಿಳಿವಳಿಕೆ ಅಗತ್ಯ - ಪ್ರಾಚಾರ್ಯ ಬೂದೆಪ್ಪ ಅಭಿಮತ

ಶಶಿಧರ ಎಲ್

ರಾಯಚೂರು: ಭಾರತದ ಪ್ರತಿ ಪ್ರಜೆಯೂ ನಮ್ಮ ಹೆಮ್ಮೆಯ ತ್ರಿವರ್ಣ ರಾಷ್ಟ್ರ ಧ್ವಜದ ಬಗ್ಗೆ ತಿಳಿದುಕೊಳ್ಳಬೇಕಿದೆ. ದೇಶಭಕ್ತಿ ಬೆಳೆಸಿಕೊಂಡು ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕು ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬೂದಪ್ಪ ಹೇಳಿದರು.

ನಗರದ ಕಾಲೇಜಿನ ಸಭಾಂಗಣದಲ್ಲಿ ಭಾರತ್ ಸೇವಾದಳ ಜಿಲ್ಲಾ ಸಮಿತಿ ಹಾಗೂ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ದೇಶ ಸೇವೆಯಲ್ಲಿ ತೊಡಗಬೇಕು ಎಂದರು.

ಉಪನ್ಯಾಸಕ ಸಿದ್ದಣ್ಣ ನೆಲೋಗಿ ಮಾತನಾಡಿ, ಭಾರತ ಭಾವೈಕ್ಯ ನಾಡಾಗಿದ್ದು ಇಲ್ಲಿ ಎಲ್ಲರೂ ಸಹಬಾಳ್ವೆ ನಡೆಸುತ್ತಿದ್ದಾರೆ. ಆದ್ದರಿಂದ ಯಾವುದೇ ದುಷ್ಟ ಶಕ್ತಿಗಳಿಗೆ ಮಾತುಕೊಡದೆ ಎಲ್ಲರೂ ದೇಶದ ಪ್ರಗತಿಗಾಗಿ ದುಡಿಯಬೇಕು ಎಂದು ಹೇಳಿದರು.

ಭಾರತ ಸೇವಾದಳ ವಿಭಾಗ ಸಂಘಟಿಕರಾದ ವಿದ್ಯಾಸಾಗರ್ ಚಿನಮಗೇರಿ, ರಾಷ್ಟ್ರ ಧ್ವಜದ ಮಹತ್ವ ಹಾಗೂ ಧ್ವಜ ನಿಯಮಗಳ ಬಗ್ಗೆತಿಳಿಸಿಕೊಟ್ಟರು. ಕನ್ನಡ ಉಪನ್ಯಾಸಕ ಗೋವರ್ಧನ್ ರೆಡ್ಡಿ, ಜಿಲ್ಲಾ ಸಹಕಾರ ಒಕ್ಕೂಟದ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅಮ್ಮಿನಬಾವಿ ಹಾಗೂ ಉಪನ್ಯಾಸಕರು ಇದ್ದರು.