ನರಗುಂದ: ಕಬ್ಬಿನ ಗದ್ದೆಯಲ್ಲಿ ಆಶ್ರಯ ಪಡೆದಿದ್ದ ಮೂರು ಕಾಡು ಬೆಕ್ಕಿನ ಮರಿಗಳನ್ನು ಸಂರಕ್ಷಿಸಿ ತಾಯಿ ಬೆಕ್ಕಿನೊಂದಿಗೆ ಸೇರ್ಪಡೆಗೊಳಿಸಿರುವ ಕಾರ್ಯವನ್ನು ಸಮೀಪದ ಹೊಳೆ ಹಡಗಲಿ ರೈತರಿಬ್ಬರು ಮಾಡಿದ್ದಾರೆ.
ಗ್ರಾಮದ ಭೀಮಪ್ಪ ಹೂಗಾರ ಹಾಗೂ ನಿಂಗನಗೌಡ ಕೆಂಚನಗೌಡ್ರ ಅವರ ಜಮೀನಿನಲ್ಲಿ ಕಬ್ಬಿನ ಕಟಾವು ಮಾಡುತ್ತಿದ್ದಾಗ ಮೂರು ಕಾಡು ಬೆಕ್ಕಿನ ಮರಿಗಳು ಪತ್ತೆಯಾಗಿದ್ದವು. ಮರಿಗಳನ್ನು ಕಂಡ ಭೀಮಪ್ಪ ಅವರು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಅವರಿಗೆ ಮಾಹಿತಿ ನೀಡಿದ್ದಾರೆ. ಮಂಜುನಾಥ ಅವರು ರೋಣ ಉಪವಲಯ ಅರಣ್ಯಾಧಿಕಾರಿ ಅನ್ವರ ಕೋಲ್ಹಾರ, ವನ್ಯಜೀವಿ ಸಂಶೋಧಕ ಹಾಗೂ ಛಾಯಾಗ್ರಾಹಕ ಸಂಗಮೇಶ ಕಡಗದ ಅವರೊಂದಿಗೆ ಕಬ್ಬಿನ ಗದ್ದೆಗೆ ಆಗಮಿಸಿ, ಬೆಕ್ಕಿನ ಮರಿಗಳನ್ನು ಅವುಗಳ ತಾಯಿ ಬಂದು ಒಂದೊಂದಾಗಿ ತನ್ನ ಮರಿಗಳನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗುವಂತೆ ಮಾಡುವಲ್ಲಿ ಯಶಸ್ವಿಯಾದರು.