ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಮೂವರು ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮೂವರು ರೈತರ ಮಕ್ಕಳು ಎಂಬುದೇ ವಿಶೇಷವಾಗಿದೆ.
ವಿದ್ಯಾರ್ಥಿನಿ ಕೆ.ಸಿ.ಪಂಚಮಿ 625ಕ್ಕೆ 621 ಅಂಕಗಳನ್ನು ಪಡೆದು ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇಂಗ್ಲಿಷ್, ಹಿಂದಿ, ವಿಜ್ಞಾನದಲ್ಲಿ ಶೇ.100ರಷ್ಟು ಅಂಕಗಳಿಸಿದ್ದಾರೆ. ಕನ್ನಡ 124, ಗಣಿತ 99, ಸಮಾಜ ವಿಜ್ಞಾನ 98 ಅಂಕ ಗಳಿಸಿದ್ದಾರೆ. ರೈತ ಕುಟುಂಬದ ಪಂಚಮಿ, ನೇರುಗಳಲೆ- ಅಬ್ಬೂರುಕಟ್ಟೆ ಗ್ರಾಮದ ತನ್ನ ಅಜ್ಜಿ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿದ್ದಾರೆ. 5ನೇ ತರಗತಿಯಿಂದ ಕುವೆಂಪು ಶಾಲೆಯಲ್ಲಿ ಕಲಿತ್ತಿದ್ದರು.
ತಂದೆ ಚಂದ್ರಕುಮಾರ್ ಹೆತ್ತೂರು ಗ್ರಾಮದಲ್ಲಿ ಕೃಷಿ ಕೆಲಸ ಮಾಡುತ್ತಾರೆ. ತಾಯಿ ಶಿಲ್ಪ ಬೆಂಗಳೂರಿನಲ್ಲಿ ನರ್ಸ್ ಕೆಲಸ ಮಾಡುತ್ತಿದ್ದಾರೆ.
ಪಂಚಮಿ ಮಾತನಾಡಿ, ಎರಡು ಹೆಚ್ಚಿನ ಅಂಕದ ನಿರೀಕ್ಷೆ ಇತ್ತು. ನಿದ್ದೆಗೆಟ್ಟು ಓದುತ್ತಿರಲಿಲ್ಲ. ಪರೀಕ್ಷೆ ಸಂದರ್ಭದಲ್ಲಿ ರಾತ್ರಿ 11 ತನಕ ಮತ್ತು ಬೆಳಗ್ಗೆ 4 ಗಂಟೆಗೆ ಎದ್ದು ಓದಿದ್ದೇನೆ. ಶಾಲೆಯಲ್ಲಿ ಶಿಕ್ಷಕರು ಮತ್ತು ಮುಖ್ಯಶಿಕ್ಷಕಿ ಮಿಲ್ಲಿ ಅವರು ತುಂಬ ಪ್ರೋತ್ಸಾಹ ನೀಡುತ್ತಿದ್ದರು. ಶಾಲೆಯಲ್ಲೇ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಪರೀಕ್ಷೆಯನ್ನು ಎದುರಿಸುವ ಬಗ್ಗೆ ಹೇಳಿಕೊಟ್ಟಿದ್ದರು. ಭಯಮುಕ್ತವಾಗಿ ಪರೀಕ್ಷೆ ಬರೆದರೆ ಯಶಸ್ಸು ಖಂಡಿತ ಎಂದ ಅವರು, ಶಾಲಾ ಆಡಳಿತ ಮಂಡಳಿಯವರು ಹೆಚ್ಚಿನ ಸಹಕಾರ ನೀಡುತ್ತಾರೆ ಎಂದು ಹೇಳಿದರು. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿತು, ನಂತರ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.
ವಿದ್ಯಾಸಂಸ್ಥೆಯ ಸಿ.ಎಸ್.ತೇಜಸ್ವಿನಿ ಮತ್ತು ಸಿ.ಎಸ್.ಆದ್ವಿ 625 ಅಂಕಗಳಿಗೆ 619 ಅಂಕಗಳನ್ನು ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದ್ದಾರೆ. ಚಿಕ್ಕತೋಳೂರು ಗ್ರಾಮದ ಸೋಮಶೇಖರ್ ಶೈಲಾ ದಂಪತಿ ಪುತ್ರಿ ತೇಜಸ್ವಿನಿ, ಬೆಂಕಳ್ಳಿ-ಕೊತ್ನಳ್ಳಿ ಗ್ರಾಮದ ಸತೀಶ್, ಪ್ರಗತಿ ದಂಪತಿಗಳ ಪುತ್ರಿ ಆದ್ವಿ.
ತೇಜಸ್ವಿನಿ ಕನ್ನಡ 123, ಇಂಗ್ಲಿಷ್ 99, ಹಿಂದಿ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನದಲ್ಲಿ 97 ಅಂಕಗಳಿಸಿದ್ದಾಳೆ. ಆದ್ವಿ ಕನ್ನಡ 123, ಇಂಗ್ಲಿಷ್ 100, ಹಿಂದಿ 99, ಗಣಿತ 100, ವಿಜ್ಞಾನ 99, ಸಮಾಜ ವಿಜ್ಞಾನ 98 ಅಂಕಗಳಿಸಿದ್ದಾಳೆ.
ಸಂಸ್ಥೆಯ ಕೆ.ಎಸ್.ರೇಚನಾ 615( ಶೇ 98.4), ವೈ.ಡಿ.ಧನ್ಯತಾ 609(ಶೇ.97.44) ರೋಷಿನಿ ಸತೀಶ್ 604( ಶೇ.96.6) ಅಂಕಗಳಿಸಿದ್ದಾರೆ.
ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕಳೆದ 9 ವರ್ಷಗಳಿಂದ ಸತತ 100ರಷ್ಟು ಫಲಿತಾಂಶ ಪಡೆದಿದ್ದು, ಪ್ರಸಕ್ತ ವರ್ಷ 48 ವಿದ್ಯಾರ್ಥಿಗಳಲ್ಲಿ ಮೂವರು ವಿದ್ಯಾರ್ಥಿಗಳು ಫೇಲ್ ಆಗಿದ್ದು, ಶೇ.94 ರಷ್ಟು ಫಲಿತಾಂಶ ದೊರೆತ್ತಿದೆ.