ಜಿಲ್ಲೆ

ಮೂವರು ಚಾಲಾಕಿ ಮನೆಗಳ್ಳರ ಬಂಧನ, 47.42 ಲಕ್ಷ ರೂ.ಮೌಲ್ಯದ 832 ಗ್ರಾಂ ಚಿನ್ನಾಭರಣ ವಶ

ಮೈಸೂರು: ಮೂವರು ಚಾಲಾಕಿ ಮನೆಗಳ್ಳರನ್ನು ಬಂಧಿಸಿರುವ ನರಸಿಂಹರಾಜ ಪೊಲೀಸರು 47.42 ಲಕ್ಷ ರೂ.ಮೌಲ್ಯದ 832 ಗ್ರಾಂ ಚಿನ್ನಾಭರಣ, 37 ಗ್ರಾಂ ಬೆಳ್ಳಿ ಕಾಯಿನ್‌ಗಳು ಹಾಗೂ 1,70,000 ರೂ.ವಶಪಡಿಸಿಕೊಂಡಿದ್ದಾರೆ.

ಸೈಯದ್ ಅಯೂಬ್, ಮಹಮದ್ ಮುನ್ನ ಹಾಗೂ ಆಸಿಫ್ ಬಂಧಿತರು. ಮತ್ತೊಬ್ಬ ಆರೋಪಿ ಫಯಾಸ್ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂಬಂಧ ನರಸಿಂಹರಾಜ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಮೈಸೂರಿನ ಉನ್ನತಿ ನಗರದಲ್ಲಿ ಕಳುವು ಮಾಡಿದ ಚಿನ್ನಾಭರಣಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮದ್ದೂರು, ಶ್ರೀರಂಗಪಟ್ಟಣ, ಕೆ.ಆರ್.ನಗರ ಹಾಗೂ ಮೈಸೂರು ಗ್ರಾಮಾಂತರ ಠಾಣೆಯ ತಲಾ ಒಂದು ಕಳುವು ಪ್ರಕರಣಗಳು ಪತ್ತೆಯಾಗಿವೆ.

ಸೈಯದ್ ಅಯೂಬ್ ಹಾಗೂ ಮಹಮದ್ ಮುನ್ನಾ ವಿರುದ್ಧ ಬೆಳಗಳೂರಿನ ವಿವಿಧ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಅಲ್ಲದೆ ಆಸಿಫ್ ಮತ್ತು ಫಯಾಜ್ ವಿರುದ್ಧ ಮೈಸೂರಿನಲ್ಲಿ ಸಾಕಷ್ಟು ಕಳುವು ಪ್ರಕರಣಗಳಿವೆ. ಈಗಾಗಲೇ ನಾಲ್ವರು ಆರೋಪಿಗಳು ಇತ್ತೀಚಗಷ್ಟೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಸೈಯದ್ ಅಯೂಬ್ ಡಿ.27 ರಂದು, ಮಹಮದ್ ಮುನ್ನ ನ.29 ರಂದು, ಆಸಿಫ್ ಮತ್ತು ಫಯಾಜ್ ಜ.7 ರಂದು ಬಿಡುಗಡೆ ಆಗಿದ್ದಾರೆ. ಕಳುವು ಪ್ರಕರಣಗಳಲ್ಲಿ ಭಾಗಿ ಆಗಿ ಜೈಲು ವಾಸ ಅನುಭವಿಸಿದ್ದರೂ ಆರೋಪಿಗಳು ತಮ್ಮ ಚಾಳಿ ಮುಂದುವರೆಸಿದ್ದಾರೆ.

ಸೈಯದ್ ಅಯೂಬ್ ಹಾಗೂ ಮಹಮದ್ ಮುನ್ನಾ ಒಂದು ತಂಡವಾದ್ರೆ ಆಸಿಫ್ ಮತ್ತು ಫಯಾಸ್ ಮತ್ತೊಂದು ಗ್ಯಾಂಗ್ ಆಗಿದೆ. ಎರಡು ಗ್ಯಾಂಗ್‌ಗಳು ಜೈಲಿನಲ್ಲಿ ಒಂದಾಗಿ ಕಳ್ಳತನದ ಸ್ಕೆಚ್ ಹಾಕಿ ಸಕ್ಸಸ್ ಆಗಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ವೈದ್ಯರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.