ಜಿಲ್ಲೆ

ಕೆರೆಯಲ್ಲಿ ಈಜಲು ಹೋದ ಆರು ವಿದ್ಯಾರ್ಥಿಗಳು, ಮೂವರ ಸಾವು

ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 
ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬ ನೇ ತರಗತಿ ವಿದ್ಯಾರ್ಥಿ ನಿಹಾಲ್ ರಾಜ್ (೧೧ ವರ್ಷ), ೮ ನೇ ತರಗತಿ ವಿದ್ಯಾರ್ಥಿ ವಿಷ್ಟುವರ್ಧನ್(೧೩ ವರ್ಷ) ಹಾಗೂ ಬಾಗೇಪಲ್ಲಿ ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಹರ್ಷವರ್ಧನ್ (೧೬ ವರ್ಷ) ಮೃತರು.  
ಇತ್ತೀಚಿಗೆ ಎಚ್.ಎನ್.ವ್ಯಾಲಿ ನೀರು ಹರಿಸಿದ್ದು ಕೆರೆ ನೀರಿನಿಂದ ತುಂಬಿತ್ತು.  ಶುಕ್ರವಾರದಂದು ಮದ್ಯಾಹ್ನ ಗ್ರಾಮದ ಆರು ವಿದ್ಯಾರ್ಥಿಗಳು  ಈಜಲು ಹೋಗಿದ್ದು, ಈ ಪೈಕಿ ಮೃತ ಮೂವರು ಈಜಿಕೊಂಡು ಕೆರೆ ಮಧ್ಯ ಭಾಗಕ್ಕೆ ಹೋಗಿ, ಆಳವಾದ ಕಡೆ ಮುಳುಗಿ ಉಸಿರು ಚೆಲ್ಲಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಉಳಿದವರ ಪ್ರಾಣ ಉಳಿದಿದೆ.  ಮೃತರ ಪೈಕಿ ಒಬ್ಬ ಕೆರೆ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ  ಮೃತಪಟ್ಟಿದ್ದಾರೆ. ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದ್ದು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮೃತರ ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು. 
ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ  ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಿತು. ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.