ಚಿಕ್ಕಬಳ್ಳಾಪುರ: ದೇವಸ್ಥಾನದಲ್ಲಿನ ಒಡವೆಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾರಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಹಿರಿಯಚಲೇನಹಳ್ಳಿಯ ಶ್ರೀ ಚೌಡೇಶ್ವರಿ ದೇಗುಲದಲ್ಲಿ ಪ್ರಕರಣ ನಡೆದಿದ್ದು ದೇವರಿಗೆ ಅಲಂಕರಿಸಿದ್ದ ಒಡವೆಗಳನ್ನು ಕದ್ದು ಯಾರೋ ಪರಾರಿಯಾಗಿದ್ದಾರೆ ಎಂಬ ನಾಟಕವಾಡಿದ ಪೂಜಾರಿ, ಕೃತ್ಯದಲ್ಲಿ ಭಾಗಿಯಾಗಿದ್ದ ಮಹಿಳೆಯು ಸೇರಿದಂತೆ ಮೂವರನ್ನು ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.
ಚೌಡೇಶ್ವರಿ ದೇಗುಲದ ಪೂಜಾರಿ ಬೈಯಪ್ಪನಹಳ್ಳಿಯ ಚಿಕ್ಕಮಲ್ಲೇಶಪ್ಪ ( 68), ಬೆಂಗಳೂರು ಉತ್ತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದ ಲತಾ(45), ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರದ ಖಾಸಗಿ ಲೇವಾದೇವಿದಾರ ನವೀನ್ ಕುಮಾರ್ (30) ಬಂಧಿತರು. ಇವರಿಂದ ಬೆಳ್ಳಿ ದೇವಿಯ ಮುಖವಾಡಗಳು, ಮೂಗುತಿ, ಬೆಳ್ಳಿ ದೇವರ ಛತ್ರಿಗಳು, ಬಂಗಾರದ ತಾಳಿ ಬೊಟ್ಟುಗಳು, ಬೆಳ್ಳಿ ಕಾಲ್ಗೆಜ್ಜೆಗಳು ಸೇರಿದಂತೆ 1.79 ಲಕ್ಷ ರೂ ಮೌಲ್ಯದ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
*ಕಳ್ಳರ ನಾಟಕ ಬಯಲು*
ಕಳೆದ ಜುಲೈ 23 ರಂದು ಚೌಡೇಶ್ವರಿ ದೇಗುಲದಲ್ಲಿ ಒಡೆವೆಗಳನ್ನು ಕಳವಾಗಿರುವುದರ ಬಗ್ಗೆ ದಿಬ್ಬೂರಹಳ್ಳಿ ಗ್ರಾಮ ಆಡಳಿತಾಧಿಕಾರಿ ಎನ್.ಸುಭಾಷಿಣಿ ಇಲ್ಲಿನ ಠಾಣೆಗೆ ದೂರು ನೀಡಿದ್ದರು. ಹಾಗೆಯೇ ಪೂಜಾರಿಯ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣವನ್ನು ಭೇದಿಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ, ಡಿವೈಎಸ್ಪಿ ಪಿ.ಮುರಳೀಧರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ.ಶ್ರೀನಿವಾಸ, ಪಿಎಸ್ಐಗಳಾದ ಶ್ಯಾಮಲಾ ಹಾಗೂ ಟಿ.ವೆಂಕಟರಮಣ ನೇತೃತ್ವದ ತಂಡವನ್ನು ಪ್ರಕರಣದ ತನಿಖೆಗೆ ರಚಿಸಲಾಗಿತ್ತು. ಇದು ಪೂಜಾರಿ ಸಮೇತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
*ದಿಕ್ಕು ತಪ್ಪಿಸಲು ಪ್ರಯತ್ನ*
ದೇಗುಲದಲ್ಲಿ ಒಡವೆಗಳನ್ನು ಯಾರೋ ಕಳ್ಳರು ಕದ್ದು ಪರಾರಿಯಾಗಿರುವುದರ ಬಗ್ಗೆ ಪುತ್ರ ಮಂಜುನಾಥ್ ತನಗೆ ತಿಳಿಸಿದ ಎಂಬುದಾಗಿ ಮೊದಲು ಪೂಜಾರಿ ಹೇಳಿಕೆ ನೀಡಿದ್ದ. ಆದರೆ, ಒಂದೊಂದು ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಪ್ರದರ್ಶಿಸಿದ ಅನುಮಾನಾಸ್ಪದ ನಡೆಯನ್ನು ಅರಿತು, ಪೊಲೀಸರು ಸತ್ಯಾಂಶವನ್ನು ಕಕ್ಕಿಸಿದ್ದಾರೆ. ಇನ್ನೂ ದೇಗುಲದಲ್ಲಿ ಪೂಜೆ ಮಾಡಿಕೊಂಡಿರಬೇಕಾಗಿದ್ದ ವ್ಯಕ್ತಿಯೇ ದೇವರ ಒಡವೆಗಳನ್ನು ಕದಿಯುವುದರಲ್ಲಿ ಭಾಗಿಯಾಗಿರುವುದನ್ನು ತಿಳಿದುಕೊಂಡು ಜನರು ಶಾಕ್ ಆಗಿದ್ದಾರೆ.