ಜಿಲ್ಲೆ

ಇನ್‌ಸ್ಪೆಕ್ಟರ್ ಸಹಿತ ಮೂವರು ಅಮಾನತು - ಕುಡುಪು ಗುಂಪು ಹತ್ಯೆ ಪ್ರಕರಣ - ಕರ್ತವ್ಯದಲ್ಲಿ ನಿರ್ಲಕ್ಷೃ ಆರೋಪ

ಮಂಗಳೂರು: ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿ ಏ.27ರಂದು ನಡೆದ ಗುಂಪು ಹತ್ಯೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷೃ ತೋರಿದ ಆರೋಪದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ.ಆರ್., ಹೆಡ್‌ಕಾನ್‌ಸ್ಟೆಬಲ್ ಚಂದ್ರ ಕೆ. ಹಾಗೂ ಕಾನ್‌ಸ್ಟೆಬಲ್ ಯೆಲ್ಲಾಲಿಂಗ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ.ಆರ್. ಅವರು ಗುಂಪು ಹಲ್ಲೆ ನಡೆದ ಮಾಹಿತಿ ಇದ್ದರೂ ಮೇಲಧಿಕಾರಿಗಳಿಗೆ ತಿಳಿಸಿಲ್ಲ. ಶವ ಪಂಚನಾಮೆಗೆ ಪಂಚರನ್ನಾಗಿ ಮೈದಾನದಲ್ಲಿ ಕ್ರಿಕೆಟ್ ಆಡಿದ ಆಟಗಾರರು ಹಾಗೂ ಪ್ರೇಕ್ಷಕರನ್ನು ಬಳಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ನೀಡಿದ ವರದಿಯನ್ನು ಉಲ್ಲೇಖಿಸಿ ಅಮಾನತು ಆದೇಶ ಹೊರಡಿಸಲಾಗಿದೆ.

ಗುಂಪು ಹಲ್ಲೆ ಆಗುತ್ತಿರುವ ವಿಷಯವನ್ನು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್ ದೀಪಕ್ ಅವರು ಗ್ರಾಮಾಂತರ ಠಾಣೆ ಗುಪ್ತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರ ಪಿ. ಅವರಿಗೆ ತಿಳಿಸಿದ್ದು, ಅವರು ಈ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕದೆ ಘಟನೆ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸದೆ ಕರ್ತವ್ಯ ಲೋಪ ಎಸಗಿದ್ದಾರೆ.

ಕಾನ್‌ಸ್ಟೆಬಲ್ ಯೆಲ್ಲಾಲಿಂಗ ಅವರನ್ನು ಕ್ರಿಕೆಟ್ ಪಂದ್ಯಾಟ ನಡೆಯುವಲ್ಲಿ ಬೀಟ್ ಕರ್ತವ್ಯಕ್ಕೆ ನಿಯೋಜಿಸಿದ್ದು, ಅವರು ತನ್ನ ಬೀಟ್ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವ ಬಗ್ಗೆ ಹಾಗೂ ಘಟನೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಾರದೆ ನಿರ್ಲಕ್ಷೃ ತೋರಿದ ಕಾರಣ ಅವರನ್ನು ಅಮಾನತು ಮಾಡಲಾಗಿದೆ.