ಜಿಲ್ಲೆ

ಕಾನ್‌ಸ್ಟೆಬಲ್ ಸೇರಿ ಮೂವರ ದುರ್ಮರಣ

ರವಿ ಎಸ್. ಬಳೂಟಗಿ

ಗದಗ: ಕಾರೊಂದು ಪಲ್ಟಿಯಾಗಿ ಎದುರಿಗೆ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಪೊಲೀಸ್ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹರ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.

ಹಾವೇರಿ ಜಿಲ್ಲೆಯ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಅರ್ಜುನ ನೆಲ್ಲೂರು (34) ಅವರ ಸಹೋದರ ಸಂಬಂಧಿ ರವಿ ನೆಲ್ಲೂರು (35) ಹಾಗೂ ಈರಣ್ಣ ಉಪ್ಪಾರ (38) ಮೃತಪಟ್ಟವರು.

ಕೊಪ್ಪಳ ಕಡೆಯಿಂದ ಗದಗ ಕಡೆಗೆ ಬರುತ್ತಿದ್ದ ಕಾರು ಹೊಸಪೇಟೆ ಕಡೆಗೆ ಹೊರಟಿದ್ದ ಗೋವಾದ ಸಾರಿಗೆ ಸಂಸ್ಥೆಯ ಬಸ್‌ಗೆ ರೋಡ್ ಡಿವೈಡರ್ ದಾಟಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ.

ಅಪಘಾತದ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಜಿಮ್ಸ್ಗೆ ರವಾನೆ ಮಾಡಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.