ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರದ ಜಲಾಶಯದ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ.
ಬೆಂಗಳೂರು ಮೂಲದ ಇಮ್ರಾನ್ (45), ಫರ್ಹೀನಾ (35) ಹಾಗೂ ಚಿಕ್ಕಬಳ್ಳಾಪುರ ನಿವಾಸಿ ಬಷೀರಾ (35) ಮೃತರು. ಸ್ಥಳಿಯರು ಸಿಪಿಆರ್ ನೀಡಿ, ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಘಟನೆಯ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಕೈಗೊಂಡು ಮೃತದೇಹಗಳನ್ನು ವಾರಸುದಾರರಿಗೆ ನೀಡಲಾಯಿತು. ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.
*ಹಬ್ಬಕ್ಕೆ ಪ್ರವಾಸ
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಮ್ರಾನ್, ಫರ್ಹೀನಾ ಸೇರಿದಂತೆ ಅನೇಕರು ಇಲ್ಲಿನ ಬಷೀರ್ ಮನೆಗೆ ಬಂದಿದ್ದರು. ನಂದಿ ಬೆಟ್ಟ ಸೇರಿದಂತೆ ಸ್ಥಳಿಯ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಬಳಿಕ ಶ್ರೀನಿವಾಸ ಸಾಗರ ಜಲಾಶಯಕ್ಕೆ ಕುಟುಂಬ ಸಮೇತ ಬಂದಿದ್ದರು. ಅಲ್ಲಿಯೇ ಊಟವನ್ನು ಸವಿದು, ಖುಷಿಯ ಸಂಭ್ರಮದಲ್ಲಿ ತೊಡಗಿದ್ದ ವೇಳೆ ಅವಘಡ ಸಂಭವಿಸಿದೆ.
*ಮಗನ ರಕ್ಷಣೆಗೆ ಬಲಿ
ಬಾಲಕನ ಪ್ರಾಣವನ್ನು ರಕ್ಷಿಸಲು ಹೋಗಿ ಮೂವರು ಮೃತಪಟ್ಟಿದ್ದಾರೆ. ಊಟಕ್ಕೆ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಆಟವಾಡುತ್ತಲೇ 6 ವರ್ಷದ ಆನಂ (ಫರ್ಹೀನಾ ಮಗ) ನೀರಿಗೆ ಬಿದ್ದಿದ್ದು ಈತ ಒದ್ದಾಡುತ್ತಿದ್ದನ್ನು ನೋಡಿ, ಒಬ್ಬೊಬ್ಬರೇ ನೀರಿಗಿಳಿದಿದ್ದಾರೆ. ಕೊನೆಗೆ ಮಗುವನ್ನು ಕಾಪಾಡಿದರೂ ಈಜಲು ಆಗದೇ ಮುಳುಗಿ ಮೃತಪಟ್ಟಿದ್ದಾರೆ. ದುರ್ಘಟನೆಯ ಸ್ಥಳದಲ್ಲಿ ಕೂಗಾಟವನ್ನು ಕೇಳಿಸಿಕೊಂಡು ಸ್ಥಳಿಯರು ಮೂವರನ್ನು ನೀರಿನಿಂದ ಹೊರಗೆ ತರುವಷ್ಟರಲ್ಲಿ ಉಸಿರಾಟ ನಿಂತಿತ್ತು.