ಬೆಂಗಳೂರು: ಕೆಎಸ್‌ಆರ್‌ಟಿಸಿಗೆ ಮತ್ತೆ ಮೂರು ಪ್ರಶಸ್ತಿಗಳು ಮುಡಿಗೇರಿವೆ. ನ್ಯಾಷನಲ್ ಮೀಡಿಯಾ ಕಾನ್‌ಕ್ಲೈವ್‌ನ ಎರಡು ಪ್ರಶಸ್ತಿಗಳು ಹಾಗೂ ವರ್ಲ್ಡ್ ಮಾರ್ಕೆಟಿಂಗ್ ಕಾಂಗ್ರೆಸ್‌ನ ಗ್ಲೋಬಲ್ ಮಾರ್ಕೆಟಿಂಗ್ ಎಕ್ಸಲೆನ್ಸಿಯ ಒಂದು ಪ್ರಶಸ್ತಿ ಲಭಿಸಿದೆ.
ಭುವನೇಶ್ವರದ ಕೆ.ಐ.ಐ.ಟಿ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ೭ ನೇ ನ್ಯಾಷನಲ್ ಮೀಡಿಯಾ ಕಾನ್‌ಕ್ಲೈವ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಹಿತಿ ಸಾರ್ವಜನಿಕ ಸಂಪರ್ಕ ಸಚಿವ ಪ್ರದೀಪ್ ಕುಮಾರ್ ಅಮತ್, ಉನ್ನತ ಶಿಕ್ಷಣ ಸಚಿವ ಅತನು ಸವ್ಯಸಾಚಿ ನಾಯಕ್ ಅವರು, ನಿಗಮವು ಜಾರಿ ಮಾಡಿದ ವಿನೂತನ ವಾಹನಗಳ ಪುನಶ್ಚೇತನ ಯೋಜನೆ ಉಪಕ್ರಮ ಹಾಗೂ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕಾಗಿ ಪ್ರಶಸ್ತಿಗಳನ್ನು ನಿಗಮಕ್ಕೆ ಪ್ರದಾನ ಮಾಡಿದರು.
ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಜಯಕರ ಶೆಟ್ಟಿ ಹಾಗೂ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಜಗದೀಶ್ ಅವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.