ಬಾಗೇಪಲ್ಲಿ: ಕ್ಷೇತ್ರವನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಹಾಗೂ ಭವಿಷ್ಯದಲ್ಲಿ ಮಕ್ಕಳಿಗೆ ಉತ್ತಮ ಒಳ್ಳೆಯದು ಮಾಡುವುದೇ ಗುರಿಯಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಯೋಜಿಸಿದ್ದ 76 ಗಣರಾಜ್ಯೋತ್ಸವದಲ್ಲಿ ಮಾತನಾಡಿ, ಕ್ಷೇತ್ರದ ಜನತೆಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಕೈಗಾರಿಕೆ ಸ್ಥಾಪನೆ ಮಾಡಬೇಕೆಂಬ ಬಹುದಿನಗಳ ಕನಸಿಗೆ ಸಿಎಂ ಮತ್ತು ಡಿಸಿಎಂ ಅಸ್ತು ಎಂದಿದ್ದಾರೆ. ಮೂರು ತಿಂಗಳೊಳಗೆ ಬಾಗೇಪಲ್ಲಿಯಲ್ಲಿ ಕೈಗಾರಿಕೆ ಸ್ಥಾಪನೆಯಾಗಲಿದೆ. ಅದೇರೀತಿ ಘಂಟಲಮಲ್ಲಮ್ಮ ಕಣಿವೆ ಬಳಿ 200 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಿಸಬೇಕೆಂಬ ಕನಸು ಈಡೇರಲಿದೆ ಎಂದರು.
ಇಂದು ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಇದಕ್ಕೆ ಅನೇಕ ಮಹನೀಯರ ಪ್ರಾಣತ್ಯಾಗ, ಹೋರಾಟ ಕಾರಣ. ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ ದೇಶದ ಜನತೆಗೆ ಸಮಾನತೆಯ ಹಕ್ಕು ಸಿಕ್ಕಿದೆ. ಹಾಗಾಗಿ ಇಂತಹ ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕು ಎಂದು ಹೇಳಿದರು.
ತಹಸೀಲ್ದಾರ್ ಮನೀಷಾ ಎನ್. ಪತ್ರಿ ಮಾತನಾಡಿ, ಸ್ವಾತಂತ್ರ್ಯ ಕಾಲದಿಂದಲೂ ಸಂವಿಧಾನಕ್ಕೆ ಗೌರವ ನೀಡುತ್ತಾ ಬಂದಿರುವ ಭಾರತೀಯರಿಗೆ ಸಂವಿಧಾನದ ಮಹತ್ವವನ್ನು ಸಾರುವ ಉದ್ದೇಶಕ್ಕಾಗಿ ದೇಶಾದ್ಯಂತ ಜ.26ರಂದು ಗಣರಾಜ್ಯೊತ್ಸವ ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಬಂದ ನಂತರ ಜ.26ರಂದು ಲಾಹೋರ್ ಸ್ಟೇಷನ್‌ನಲ್ಲಿ ಭಾರತೀಯರು ಸಂವಿಧಾನ ಕುರಿತು ಪೂರ್ಣ ಸ್ವರಾಜ್ ದಿನವನ್ನು ಅಚರಣೆ ಮಾಡುತ್ತಾರೆ. ಅದೇರೀತಿ ದೇಶದಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದರು.
ಶಾಲಾ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು. ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿರುವ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಶ್ರೀನಿವಾಸ್, ತಾಪಂ ಇಒ ಕೆ.ವಿ.ರಮೇಶ್, ಬಿಇಒ ವೆಂಕಟೇಶಪ್ಪ, ಲೋಕೋಪಯೋಗಿ ಇಲಾಖೆ ಎಇಇ ಪ್ರದೀಪ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಲಕ್ಷ್ಮೀ, ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ, ಶಾಸಕರ ಪುತ್ರಿ ಅಮೃತಾ, ಪುರಸಭೆ ಸದಸ್ಯರಾದ ಶ್ರೀನಿವಾಸರೆಡ್ಡಿ, ನಂಜುಂಡಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಪ್ರಭಾಕರರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ ಇತರರು ಇದ್ದರು.