ಜಿಲ್ಲೆ

ಅಪಘಾತದಲ್ಲಿ ಮೂವರ ದುರ್ಮರಣ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದಾವಸ್​ಪೇಟೆ: ರಾಷ್ಟ್ರೀಯ ಹೆದ್ದಾರಿ 48ರ ಗುಂಡೇನಹಳ್ಳಿ ಬಳಿ ಶನಿವಾರ ಬೆಳಗ್ಗಿನ ಜಾವ ಕುರಿ, ಮೇಕೆ ತುಂಬಿದ್ದ ಲಾರಿಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಲಾರಿಯಲ್ಲಿದ್ದ ಮಡಕಶಿರಾದ ಸೀನಪ್ಪ(50), ಬೆಂಗಳೂರಿನ ನಜೀರ್​ಅಹ್ಮದ್​(36), ಆನಂದ್​(42) ಮೃತರು. ಎಂದಿನಂತೆ ಕುರಿ, ಮೇಕೆ ತುಂಬಿಕೊಂಡು ಮುಧೋಳದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಲಾರಿ ತೆರಳುತ್ತಿದ್ದಾಗ ಲಾರಿಯ ಟೈಯರ್​ ಪಂಚರ್​ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ನಿಂತಿದ್ದ ಲಾರಿಗೆ ಬಸ್​ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ನಜ್ಜುಗುಜ್ಜಾಗಿದೆ. ಬಸ್​ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣ ಗಾಯಗಳಾಗಿದ್ದು, ಅವರನ್ನು ತಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸರು ಮೃತದೇಹಗಳನ್ನು ಹೊರತೆಗೆದು ರಸ್ತೆ ಸಂಚಾರ ಸುಗಮಗೊಳಿಸಿದರು. ಅಪಘಾತ ಸಂಭವಿಸಿದ ಜಾಗದಲ್ಲಿ ಅಪಾಯಕಾರಿ ತಿರುವಿದ್ದು, ಅನೇಕ ಅಪಘಾತಗಳಾದರೂ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ.