ಜಿಲ್ಲೆ

ಮಂಗಳೂರಿಗೆ ಮಾದಕ ವಸ್ತು ಸಾಗಾಟ ಮೂವರು ಅಂತರ್‌ರಾಜ್ಯ ಆರೋಪಿಗಳ ಬಂಧನ

ಹರೀಶ ಎಂ.

ಮಂಗಳೂರು: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದ ಮಂಗಳೂರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಬರ್ವಾನಿ ಮೋಹನ್ ಪಡವಾ ಗ್ರಾಮದ ಮಾಯಾರಾಮ್ (32), ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ ಪ್ರೇಮ್‌ಸಿಂಗ್ ರಾಮ ಪವಾರ (48), ಜಲಗಾಂವ್‌ನ ಅನಿಲ್ ಪ್ರಕಾಶ್ ಕೋಲಿ (35) ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 3 ಮೊಬೈಲ್ ಫೋನ್‌ಗಳು ಹಾಗೂ 1,78,920 ರೂ. ವಶಪಡಿಸಿಕೊಳ್ಳಲಾಗಿದೆ.

ಜು.2ರಂದು ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮಾದಕ ವಸ್ತು ಸೇವನೆ ಮಾಡುವವರಿಂದ ತನಿಖೆ ಆರಂಭಿಸಿ, ಹಂತ ಹಂತವಾಗಿ ಮಾದಕ ವಸ್ತುಗಳನ್ನು ಮಂಗಳೂರು ನಗರಕ್ಕೆ ಪೂರೈಕೆ ಮಾಡುವ 6 ಮಂದಿಯನ್ನು ಪತ್ತೆ ಮಾಡಿ ಈಗಾಗಲೇ ಬಂಧಿಸಲಾಗಿದೆ.

ಪ್ರಕರಣದ ತನಿಖೆ ವೇಳೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಮಾದಕ ವಸ್ತು ಸರಬರಾಜು ಆಗುತ್ತಿರುವ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕೆ ವಿಶೇಷ ತಂಡ ಕಳುಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.