ಮೈಸೂರು: ನಗರದ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಿಂದ ಡಿ.21ರಿಂದ ಮೂರು ದಿನಗಳ ಕಾಲ ನೃತ್ಯ, ನಾಟಕಗಳ ‘ಆಯಾಮೋತ್ಸವ-2024’ ಆಯೋಜಿಸಲಾಗಿದೆ.
ನಗರದ ಕಲಾಮಂದಿರದಲ್ಲಿರುವ ಕಿರುರಂಗಮಂದಿರದಲ್ಲಿ ಡಿ.21ರಂದು ಸಂಜೆ 6.30ಕ್ಕೆ ಚಾಲನೆ ನೀಡಲಾಗುವುದು. ಶಾಸಕ ಜಿ.ಟಿ.ದೇವೇಗೌಡ, ಲಲಿತಾ ದೇವೇಗೌಡ, ನೈಪುಣ್ಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಆರ್.ರಘು, ರಂಗಕಲಾವಿದ ರಾಜಶೇಖರ ಕದಂಬ, ನೂಪುರ ಸಾಂಸ್ಕೃತಿಕ ಟ್ರಸ್ಟ್‌ನ ಪ್ರೊ.ಕೆ.ರಾಮಮೂರ್ತಿ, ಅಕಾಡೆಮಿ ನಿರ್ದೇಶಕಿ ಡಾ.ಶಾಂಭವಿ ಸ್ವಾಮಿ ಭಾಗವಹಿಸುವರು.
ಬಳಿಕ ಗೋವಿನ ಹಾಡು ನೃತ್ಯ ರೂಪಕ ‘ಸತ್ಯವೇ ಮಾರ್ಗ ತ್ಯಾಗವೇ ಧರ್ಮ’ ಆಯಾಮ ವಿದ್ಯಾರ್ಥಿಗಳಿಂದ ಪ್ರಸ್ತುತಗೊಳ್ಳಲಿದೆ. ಶಾಂಭವಿ ಸ್ವಾಮಿ ಅವರು ವಿನ್ಯಾಸ, ನಿರ್ದೇಶನ ಮಾಡಿದ್ದರೆ, ಜೀವನ್ ಹೆಗ್ಗೋಡ ಬೆಳಕಿನ ವಿನ್ಯಾಸ, ಮಂಜು ಕಾಚಕ್ಕಿ ಪರಿಕರ ಇದೆ.
ಡಿ.22ರಂದು ಸಂಜೆ 6.30ಕ್ಕೆ ಸಾಂಪ್ರಾಯಕ ಮಾರ್ಗ ‘ಭರತನಾಟ್ಯ’ವನ್ನು ಆಯಾಮ ವಿದ್ಯಾರ್ಥಿಗಳು ಪ್ರಸ್ತುತಿಪಡಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಕಾಳಚನ್ನೇಗೌಡ, ಶ್ರೀರಂಗಪಟ್ಟಣದ ಓಂ ಶ್ರೀನಿಕೇತನ ಟ್ರಸ್ಟ್ ಅಧ್ಯಕ್ಷ ಪುಟ್ಟೇಗೌಡ, ರಂಗನಾಯಕಿ ಸಮಾಜದ ಅಧ್ಯಕ್ಷೆ ಆಶಾ ಪುಟ್ಟೇಗೌಡ, ವಿ-ಕೇರ್ ಸಂಸ್ಥೆ ಅಧ್ಯಕ್ಷೆ ಕುಮುದಿನಿ ಅಚ್ಚಿ, ರಂಗ ಸಮಾಜ ಸದಸ್ಯ ಸುರೇಶ್‌ಬಾಬು, ಆಯಾಮ ಅಕಾಡೆಮಿ ಅಧ್ಯಕ್ಷ ಎಸ್.ವೆಂಕಟರಮಣ (ಎಸ್‌ವಿಆರ್) ಸ್ವಾಮಿ ಭಾಗವಹಿಸುವರು.
ಡಿ.23ರಂದು ಆಯಾಮ ವಿದ್ಯಾರ್ಥಿಗಳಿಂದ ವಚನಗಳನ್ನಾಧರಿಸಿದ ನೃತ್ಯ ರೂಪಕ ‘ಅನುಭವ ಮಂಟಪ’ ಪ್ರಸ್ತುತಗೊಳ್ಳಲಿದೆ. ಶಾಂಭವಿ ಸ್ವಾಮಿ ವಿನ್ಯಾಸ, ನಿರ್ದೇಶನ, ಜೀವನ್ ಹೆಗ್ಗೋಡ್ ಬೆಳಕು, ಮಂಜು ಕಾಚಕ್ಕಿ ರಂಗ ಸಜ್ಜಿಕೆ, ಪರಿಕರ ಇರಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಮಾಜಿ ನಿರ್ದೇಶಕ ಜನಾರ್ದನ (ಜನ್ನಿ), ನಿರಂತರ ಫೌಂಡೇಷನ್‌ನ ಪ್ರಸಾದ್ ಕುಂದೂರು, ಗೋತಮಿ ಫೌಂಡೇಷನ್‌ನ ಕೆ.ಶಿವಲಿಂಗಯ್ಯ, ಆಯಾಮ ಅಕಾಡೆಮಿ ಟ್ರಸ್ಟಿ ಎಸ್.ವಿ.ಪೂರ್ಣಚಂದ್ರ ತೇಜಸ್ವಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.