ಮಂಡ್ಯ: ಪುರಾಣ ಪ್ರಸಿದ್ದ ತಾಲೂಕಿನ ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಮೂರು ಕೋಟಿ ರೂ ಅನುದಾನವನ್ನು ಶಾಸಕ ರವಿಕುಮಾರ್ ಗಣಿಗ ಬಿಡುಗಡೆ ಮಾಡಿದ್ದಾರೆ.
ದೇವಸ್ಥಾನದ ಅಭಿವೃದ್ಧಿಗೆಂದು ಈಗಾಗಲೇ ನೀಲ ನಕ್ಷೆ ಸಿದ್ಧವಾಗಿದೆ. ಅಂತೆಯೇ ಹಿಂದೆ ಪಂಚಲಿಂಗೇಶ್ವರ ಉತ್ಸವ ನಡೆದ ಸಮಯದಲ್ಲಿಯೇ ಅನುದಾನದ ವಿಷಯವನ್ನು ಶಾಸಕರು ಪ್ರಸ್ತಾಪಿಸಿದ್ದರು. ಕೆಲ ದಿನದಲ್ಲಿಯೇ ಕಾಮಗಾರಿಗೂ ಚಾಲನೆ ನೀಡಲಾಗುವುದು. ಆಗ ಪ್ರತಿ ಮನೆಯಿಂದಲೂ ಒಂದೊಂದು ಇಟ್ಟಿಗೆಯನ್ನು ಸಂಗ್ರಹಿಸಲಾಗುವುದು. ಒಟ್ಟಾರೆ ಎಲ್ಲರೂ ಸೇರಿ ಪಂಚಲಿಂಗೇಶ್ವರ ದೇವಸ್ಥಾನವನ್ನು ಅದ್ದೂರಿಯಾಗಿ ನಿರ್ಮಾಣ ಮಾಡೋಣ ಎಂದು ಹೇಳಿದ್ದರು. ಅದರಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮೂರು ಕೋಟಿ ರೂಗಳನ್ನು ದೇವಸ್ಥಾನಕ್ಕೆಂದು ನೀಡಿದ್ದಾರೆ.
ಪಡಿತರ ಉಪಕೇಂದ್ರ ನಿರ್ಮಾಣಕ್ಕೆ ಚಾಲನೆ: ತಾಲೂಕಿನ ಮರಲಿಂಗನದೊಡ್ಡಿ ಗ್ರಾಮದ ಜನರ ಬಹು ವರ್ಷದ ಬೇಡಿಕೆಯಂತೆ ಪಡಿತರ ಉಪಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಸೋಮವಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.
ಹಲವು ವರ್ಷದಿಂದ ಪಡಿತರ ಪಡೆಯಲು ಕೆರಗೋಡು ಗ್ರಾಮಕ್ಕೆ ಹೋಗಬೇಕಾಗಿದೆ. ಆದ್ದರಿಂದ ನಮ್ಮ ಗ್ರಾಮದಲ್ಲಿಯೇ ಪಡಿತರ ವಿತರಣೆ ಮಾಡುವಂತಾಗಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿತ್ತು. ಕೆಲ ತಿಂಗಳ ಹಿಂದೆ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಭೂಮಿ ಪೂಜೆಗೆ ಬಂದಂತಹ ಸಂದರ್ಭದಲ್ಲಿ ಗ್ರಾಮಕ್ಕೆ ಪಡಿತರ ಉಪಕೇಂದ್ರ ಮಂಜೂರು ಮಾಡಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಅದರಂತೆ ಕೇಂದ್ರವನ್ನು ಮೇ ತಿಂಗಳಲ್ಲಿ ಪ್ರಾರಂಭಿಸಿ ಡೇರಿ ಕಟ್ಟಡದಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಇದೀಗ ಉಪಕೇಂದ್ರಕ್ಕೆ ಶಾಶ್ವತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.
ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್, ಶಿವಲಿಂಗೇಗೌಡ, ಯೋಗೇಶ್, ಅನಂತ, ಓಂಕೇಶವ, ಚೇತನ್, ಸಚ್ಚಿನ್, ಸತೀಶ್, ಪ್ರಶಾಂತ್‌ಬಾಬು ಇತರರಿದ್ದರು.