ಶ್ರೀರಂಗಪಟ್ಟಣ: ವ್ಯಕ್ತಿಯೊಬ್ಬನಿಗೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದ ಮೂವರಿಗೆ ತಲಾ 15 ಸಾವಿರ ದಂಡದೊಂದಿಗೆ 2 ವರ್ಷಕಾರಗೃಹ ಶಿಕ್ಷೆ ವಿಧಿಸಿ 3ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ತಾಲೂಕಿನ ಮಹದೇವಪುರ ಗ್ರಾಮದ ನಟರಾಜು, ಯೋಗೇಶ್ ಹಾಗೂ ತಿಮ್ಮಯ್ಯ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಕಳೆದ 2020ರಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಏರ್ಪಟ್ಟ ವೈಷಮ್ಯದ ಹಿನ್ನೆಲೆಯಲ್ಲಿ ಅದೇ ಗ್ರಾಮದ ಶಿವಕುಮಾರ್ ಎಂಬಾತನ ಮೇಲೆ ಈ ಮೂವರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು.
ಘಟನೆ ಕುರಿತು ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅಂದಿನ ಪಿಎಸ್‌ಐ ಅರ್ಚನಾ ಅವರು ತನಿಖೆ ನಡೆಸಿ ಸಾಕ್ಷಿಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಆರೋಪಿಗಳ ಪರ-ವಿರುದ್ದ ವಾದ ಆಲಿಸಿದ ನ್ಯಾಯಾಧೀಶ ಎನ್.ಗೋಪಾಲಕೃಷ್ಣ ರೈ ಅವರು ಮೂವರು ಅಪರಾಧಿಗಳಿಗೆ ಮೇಲಿನ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಅವರು ಎಂ.ಕೆ.ಪ್ರಫುಲ್ಲಾ ಹಲ್ಲೆಗೆ ಒಳಗಾದವನ ಪರ ವಾದ ಮಂಡಿಸಿದ್ದರು.