ಹಗರೆ: ಮಾದೀಹಳ್ಳಿ ಹೋಬಳಿ ಸಂಕೇನಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆ ಹಾಗೂ ಕೊಟ್ಟಿಗೆ ಕುಸಿದು ಮೂರು ಹಸುಗಳು ಸಾವಿಗೀಡಾಗಿವೆ.
ನಿರಂತರ ಸುರಿಯುತ್ತಿರುವ ಮಳೆಗೆ ಗ್ರಾಮದ ಅಣ್ಣಪ್ಪ ಶೆಟ್ಟಿ ಮತ್ತು ರತ್ನಮ ್ಮಅವರ ಮನೆ ಶಿಥಿಲಗೊಂಡಿದ್ದ, ಶನಿವಾರ ಬೆಳಗ್ಗೆ ಇದ್ದಕ್ಕಿದ್ದ ಹಾಗೆ ಕುಸಿದಿದೆ.
ಮನೆಯ ಮುಂಭಾಗದ ಹಾಲ್‌ನಲ್ಲಿ ಅಣ್ಣಪ್ಪಶೆಟ್ಟಿ, ಪತ್ನಿ ರತ್ನಮ್ಮ, ತಾಯಿ ಬದ್ರಮ್ಮ ಮಲಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆಯ ತೀವ್ರತೆ ಅರಿತು ಮಕ್ಕಳು ಗ್ರಾಮದ ಸಂಬಂಧಿಕರ ಮನೆಯಲ್ಲಿ ಮಲಗಿದ್ದರಿಂದ ಸುರಕ್ಷಿತರಾಗಿದ್ದಾರೆ. ಮನೆಗೆ ಹೊಂದಿಕೊಂಡಂತೆ ಕೊಟ್ಟಿಗೆ ಇದ್ದಿದ್ದರಿಂದ ಕೊಟ್ಟಿಗೆ ಸಂಪೂರ್ಣ ನೆಲಕ್ಕುರುಳಿದ್ದು ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳು ಅಸುನೀಗಿವೆ.
ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ಎಂ.ಮಮತಾ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.