ವಿಜಯಪುರದ ಇಂಡಿ ರಸ್ತೆಯಲ್ಲಿರುವ ನೀರು ಸಂಸ್ಕರಣಾ ಘಟಕದಲ್ಲಿ ಬಿದ್ದು ಅಸುನೀಗಿರುವ ಮಕ್ಕಳು.  
ಜಿಲ್ಲೆ

ಒಂಟೆ ಬೆನ್ನಟ್ಟಿ ಹೋದ ಮೂವರು ಮಕ್ಕಳು ಶವವಾಗಿ ಪತ್ತೆ

Vijyapura - Parsuram Bhasagi

ವಿಜಯಪುರ: ಒಂಟೆಯ ಮೇಲೆ ಕುಳಿತು ಆಟವಾಡಿದ ಮೂವರು ಮಕ್ಕಳು ಬಳಿಕ ಅದರ ಬೆನ್ನಟ್ಟಿ ಹೋಗಿ ನಾಪತ್ತೆಯಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

ಗಚ್ಚಿನಕಟ್ಟಿ ಕಾಲನಿಯ ಮಿಹಿರ್ ಶ್ರೀಕಾಂತ ಜಾನಗೌಳಿ (7.1), ಗದಗನ ಜನತಾ ಬಜಾರದ ಕಂಬಾರ ಗಲ್ಲಿಯ ಅನುಷ್ಕಾ ಅನೀಲ ದಹಿಂಡೆ (10.5) ಹಾಗೂ ವಿಜಯ ಅನೀಲ ದಹಿಂಡೆ (7.7) ಮೃತ ದುರ್ದೈವಿಗಳು. ಇಂಡಿ ರಸ್ತೆಯಲ್ಲಿರುವ ಮಹಾನಗರ ಪಾಲಿಕೆ ವ್ಯಾಪ್ತಿಯ ಯುಜಿಡಿ ನೀರು ಸಂಸ್ಕರಣ ಘಟಕದಲ್ಲಿ ಸೋಮವಾರ ಮಕ್ಕಳ ಶವ ಪತ್ತೆಯಾಗಿದೆ.

ಘಟನೆ ವಿವರ

ಭಾನುವಾರ ಬೆಳಗ್ಗೆ ಗಚ್ಚಿನ ಕಟ್ಟಿ ಕಾಲನಿಯ ಚಾಬಕ್‌ಸಾಬ್ ದರ್ಗಾ ಬಳಿ ಈ ಮೂವರು ಮಕ್ಕಳು ಆಟವಾಡುತ್ತಿದ್ದರು. ಅಲ್ಲಿಗೆ ಬಂದ ಒಂಟೆ ಮೇಲೆ ಕುಳಿತು ಈ ಮೂವರು ಆಟವಾಡಿದ್ದಾರೆ. ಬಳಿಕ ಅದೇ ಒಂಟೆಯ ಹಿಂದೆ ಹಿಂದೆ ಹೋಗಿದ್ದಾರೆ. ಮಕ್ಕಳು ಅದೇ ಸ್ಥಳದಲ್ಲಿಯೇ ಆಟವಾಡುತ್ತಿರಬಹುದೆಂದು ಪಾಲಕರು ಉದಾಸೀನ ತೋರಿದ್ದಾರೆ. ಬಳಿಕ ಸಂಜೆಯಾದರೂ ಮಕ್ಕಳು ಮರಳಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ಎಲ್ಲೂ ಮಕ್ಕಳ ಸುಳಿವು ಸಿಗದ ಹಿನ್ನೆಲೆ ಸ್ಥಳೀಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಮಕ್ಕಳ ಪತ್ತೆಗೆ ಜಾಲ ಬೀಸಿದ್ದಾರೆ. ನಗರದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿ ಮಕ್ಕಳು ಅಂಗಡಿ-ಮುಂಗಟ್ಟುಗಳ ಮುಂದೆ ಆಟವಾಡುತ್ತಾ ಮನೆಯಿಂದ ಸುಮಾರು 1 ಕಿಮೀ ದೂರವಿರುವ ಯುಜಿಡಿ ನೀರು ಸಂಸ್ಕರಣ ಘಟಕದತ್ತ ಹೋಗಿರುವುದು ಗಮನಕ್ಕೆ ಬಂದಿದೆ.

ಮರುದಿನ ಶವವಾಗಿ ಪತ್ತೆ

ಸೋಮವಾರ ಮಕ್ಕಳ ಹುಡುಕಾಟದಲ್ಲಿರುವ ಪೊಲೀಸರು ಮತ್ತು ಕುಟುಂಬಸ್ಥರಿಗೆ ಯುಜಿಡಿ ನೀರು ಸಂಸ್ಕರಣ ಘಟಕದಲ್ಲಿ ಮೂವರು ಮಕ್ಕಳು ಶವವಾಗಿ ತೇಲುತ್ತಿರುವುದು ಗಮಕ್ಕೆ ಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ ನೋಡಲಾಗಿ ನಾಪತ್ತೆಯಾದ ಮಕ್ಕಳ ಶವವೆಂಬುದು ದೃಢಪಟ್ಟಿದೆ.
ಮಕ್ಕಳು ಒಂಟೆ ಬೆನ್ನಟ್ಟಿಕೊಂಡು ಯುಜಿಡಿ ನೀರು ಸಂಸ್ಕರಣ ಘಟಕದವರೆಗೆ ಹೋಗಿದ್ದಾರೆ. ಅಲ್ಲಿ ನೀರು ಕಾಣುತ್ತಿದ್ದಂತೆ ಸಂಸ್ಕರಣಾ ಘಟಕದೊಳಗೆ ತೆರಳಿ ಆಟವಾಡಲೆಂದೋ ಅಥವಾ ನೀರು ತುಂಬಿಕೊಳ್ಳಲೆಂದೋ ಹೋಗಿ ಘಟಕಕ್ಕೆ ಬಿದ್ದು ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ.

ರಜೆಗೆ ಬಂದಿದ್ದ ಮಕ್ಕಳು

ಮೃತ ಮಕ್ಕಳ ಪೈಕಿ ಅನುಷ್ಕಾ ಅನೀಲ ದಹಿಂಡೆ (10.5) ಹಾಗೂ ವಿಜಯ ಅನೀಲ ದಹಿಂಡೆ (7.7) ಗದಗ ಮೂಲದವರಾಗಿದ್ದು, ಬೇಸಿಗೆ ರಜೆ ಕಳೆಯಲೆಂದು ಅಜ್ಜಿಯ ಮನೆಗೆ ಬಂದಿದ್ದರು. ಕುಟುಂಬಸ್ಥರು ಕೂಡ ಮಕ್ಕಳ ರಜೆಗೆ ಪೂರಕವಾಗಿ ಆಟ-ಪಾಠಗಳಲ್ಲಿ ತಲ್ಲೀನರಾಗಿಸಿದ್ದರು. ಆದರೆ, ಆ ರಜೆಯ ಆಟವೇ ಇಂದು ಮಕ್ಕಳ ಜೀವಕ್ಕೆ ಎರವಾಯಿತೆಂದು ಸ್ಥಳೀಯರು ದುಃಖ ತೋಡಿಕೊಂಡರು.
ಇನ್ನು ನೀರು ಸಂಸ್ಕರಣ ಘಟಕದ ಮುಖ್ಯ ದ್ವಾರದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸಂದರ್ಭ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಇದ್ದಿದ್ದರೆ ಇಂಥ ಅವಘಢ ಸಂಭವಿಸುತ್ತಿರಲಿಲ್ಲ. ಈ ಸಾವಿನ ಹೊಣೆ ಸ್ಥಳೀಯ ಸಂಸ್ಥೆಯೇ ಹೊರಬೇಕೆಂದು ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದವು.