ಬೀದರ್: ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ಸಹೋದರರು ನೀರು ಪಾಲಾಗಿರುವ ಭೀಕರ ಘಟನೆ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಚಳಕಾಪುರ ವಾಡಿಯಲ್ಲಿ ನಡೆದಿದೆ.
ಮೊದಲು 16 ವರ್ಷದ ಕಿರಿಮಗ ಹನುಮಂತ ರೆಡ್ಡಿ ಕೃಷಿ ಹೊಂಡದಲ್ಲಿ ಕೈಕಾಲು ಮುಖ ತೊಳೆದುಕೊಳ್ಳಲು ಹೋಗಿ ಕಾಲು ಜಾರಿ ನೀರಿನಲ್ಲಿ ಬೀಳುತ್ತಾನೆ. ಆತನ ರಕ್ಷಣೆಗೆ ಹೋದ ಎರಡನೇ ಸಹೋದರ ಕರಿಬಸಪ್ಪ (18) ಕೂಡ ನೀರಿನಲ್ಲಿ ಸಿಲುಕುತ್ತಾನೆ. ಇಬ್ಬರನ್ನು ರಕ್ಷಿಸಲು ಮುಂದಾದ ಇನ್ನೊರ್ವ ಸಹೋದರ ಈರಪ್ಪನೂ ಸಹ ನೀರಿನಲ್ಲಿ ಮುಳಗಿ ಜೀವ ಕಳೆದುಕೊಳ್ಳುತ್ತಾನೆ.
ಮೂವರ ಸಹೋದರ ಪೈಕಿ ಯಾರಿಗೂ ಈಜಲು ಬರದ ಹಿನ್ನೆಲೆಯಲ್ಲಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹಳ್ಳಿಖೇಡ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಖಟಕಚಿಂಚೋಳಿಯ ಮೂಲದವರಾಗಿದ್ದು, ಜಮೀನಿನಲ್ಲಿ ಕೆಲಸ ಮಾಡಿದ ಬಳಿಕ ಮೂವರೂ ಕೃಷಿ ಹೊಂಡಕ್ಕೆ ಹೋದಾಗ ದುರಂತ ಸಂಭವಿಸಿದೆ. (ದಿಗ್ವಿಜಯ ನ್ಯೂಸ್)