ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಮೂರು ಸೇತುವೆಗಳು ಸೋಮವಾರ ಮುಳುಗಡೆಯಾಗಿವೆ.
ನಾಲ್ಕೆದು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೆಲೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಮನೆ ಗೋಡೆಗಳು ಕುಸಿದು ಬೀಳುತ್ತಿವೆ. ಸೋಮವಾರ ಬೆಳಗಿನ ಜಾವ ಜಿಲ್ಲೆಯ ಗೋಕಾಕ ನಗರದ ಮಹಾಲಿಂಗೇಶ್ವರ ಕಾಲನಿಯಲ್ಲಿ ಮನೆಯ ಗೋಡೆ ಕುಸಿದು ಮೂರು ವರ್ಷ ಮಗು ಕೀರ್ತಿ ಪೂಜಾರಿ ಮೃತಪಟ್ಟಿದ್ದಾಳೆ. ಮತ್ತೋರ್ವ ಬಾಲಕಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮತ್ತೊಂದು ಕೋಣೆಯಲ್ಲಿ ಮಲಗಿದ್ದ ತಂದೆ-ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕ ನಗರ ಪೊಲೀಸರು ತಿಳಿಸಿದ್ದಾರೆ.
ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿದ್ನಾಳ-ಅಕ್ಕೋಳ, ಬಾರವಾಡ-ಕುಣ್ಣೂರು ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳ ಹಂತದ ಸೇತುವೆಯೂ ಮುಳುಗಡೆಯಾಗುವ ಸ್ಥಿತಿಯಲ್ಲಿವೆ. ವೇದಗಂಗಾ, ದೂಧಗಂಗಾ ಹಾಗೂ ಕೃಷ್ಣಾ ನದಿ ತೀರದ ಗ್ರಾಮಗಳ ಜನರಿಗೆ ಕರೊನಾ ವೈರಸ್ ಜತೆಗೆ, ಪ್ರವಾಹದ ಆತಂಕವೂ ಎದುರಾಗಿದೆ.
ವಿದ್ಯುತ್ ಕಡಿತ: ನಾಲ್ಕೆದು ದಿನಗಳಿಂದ ಮಳೆ ಮುಂದುವರಿದಿದ್ದು, ಅಲ್ಲಲ್ಲಿ ವಿದ್ಯುತ್ ಕಂಬ, ತಂತಿಗಳು ನೆಲಕ್ಕೆ ಬಿದ್ದಿದ್ದರಿಂದ ಕೆಲ ಗ್ರಾಮ ಹಾಗೂ ಕಾಡಂಚಿನ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಿರಂತರ ಮಳೆಯಿಂದ ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ಪರದಾಡುವಂತಾಗಿದೆ. ಮಲಪ್ರಭಾ, ಘಟಪ್ರಭಾ ನದಿಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.