ಚಿಕ್ಕಬಳ್ಳಾಪುರ: ತಾಲೂಕಿನ ರಂಗಧಾಮ ಕೆರೆಯಲ್ಲಿ ಗೃಹಿಣಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂವರ ಮೃತದೇಹವು ಪತ್ತೆಯಾಗಿದ್ದು ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.
ಬೋಧಗಾನಹಳ್ಳಿಯ ಲಾವಣ್ಯ (30), ನಿಹಾರಿಕಾ (12) ಹಾಗೂ ನೇಹಾ (9) ಮೃತರು ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳೊಂದಿಗೆ ಪತ್ನಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗಂಡ ಜಯಣ್ಣ ಸೇರಿದಂತೆ ಕುಟುಂಬಸ್ಥರು ಗ್ರಾಮದಲ್ಲಿ ಹುಡುಕಾಡಿದ್ದಾರೆ. ಇದೇ ವೇಳೆ ಕೆರೆಯ ಬಳಿ ಮಹಿಳೆಯ ಚಪ್ಪಲಿ ಇರುವುದು ಕಾಣಿಸಿದೆ. ಇದಕ್ಕೆ ಅನುಮಾನದಿಂದ ನೀರಿನಲ್ಲಿ ಹುಡುಕಿದಾಗ ಮೂವರ ಮೃತದೇಹಗಳು ಪತ್ತೆಯಾಗಿವೆ. ಘಟನೆಯ ಸ್ಥಳಕ್ಕೆ ವೃತ್ತ ನಿರೀಕ್ಷಕ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
*ಸಾವಿನ ಬಗ್ಗೆ ಅನುಮಾನ
ಮೂವರ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ಯಾವುದೇ ಗಲಾಟೆ ಇರಲಿಲ್ಲ. ಮಕ್ಕಳೊಂದಿಗೆ ದಂಪತಿ ಅನ್ಯೋನ್ಯವಾಗಿದ್ದರು ಎಂಬುದಾಗಿ ಸ್ಥಳಿಯರು ಹೇಳುತ್ತಾರೆ. ಇನ್ನು ಇಬ್ಬರನ್ನು ಮಕ್ಕಳನ್ನು ಶಾಲೆಗೆ ಸೇರಿಸಲು ಗಂಡ ಹೆಂಡತಿ ಹೋಗಿದ್ದರು. ಶಿಕ್ಷಣ ಸಂಸ್ಥೆಯಲ್ಲಿನ ಪಾಲಕರ ಸಭೆಯಲ್ಲಿ ಬೆಳಿಗ್ಗೆ ಭಾಗವಹಿಸಿದ್ದು ಶುಲ್ಕವನ್ನು ಪಾವತಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆಯಾಗಿದೆ. ಇದೇ ವೇಳೆ ಸೋಮವಾರ ಕಟ್ಟುವುದಾಗಿ ಹೇಳಿದ ಪತಿ, ಕೆಲಸಕ್ಕೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಸಭೆಯನ್ನು ಮುಗಿಸಿಕೊಂಡು ಬರಲು ಹೆಂಡತಿಗೆ ಹೇಳಿ ಹೊರಟಿದ್ದಾನೆ. ಇದರ ನಡುವೆ ಮಧ್ಯಾಹ್ನ ಬೇಸರದಲ್ಲಿ ಮಕ್ಕಳೊಂದಿಗೆ ಮನೆಗೆ ಬಂದು ಬಳಿಕ ಲಾವಣ್ಯ ನಾಪತ್ತೆಯಾಗಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಯ ವಿಚಾರವಾಗಿ ಜುಗುಪ್ಸೆಗೊಂಡಿರುವ ಹಿನ್ನೆಲೆಯಲ್ಲಿ ದುರ್ಟನೆ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ.