ಜಿಲ್ಲೆ

ಕೊಲೆ ಆರೋಪದಡಿ ಮೂವರ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಸಮೀಪದ ಜಮೀನೊಂದರಲ್ಲಿ ನಡೆದಿದ್ದ ಕೊಲೆ ಪ್ರಕರಣ ಭೇದಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಮೂವರನ್ನು ಬಂಧಿಸಿದ್ದಾರೆ.
ಏ. 7ರಂದು ರಾತ್ರಿ ವೇಳೆ ಮದ್ಯ ಕುಡಿಯುವ ವಿಚಾರಕ್ಕೆ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಷಣ್ಮುಖಪ್ಪ ಹಡಪದ ಎಂಬಾತನ ಕೊಲೆಯಾಗಿತ್ತು. ಕೊಲೆ ಆರೋಪದಡಿ ಇಟ್ಟಿಗಟ್ಟಿ ಗ್ರಾಮದ ಪ್ರವೀಣ ಕುಬಿಹಾಳ (25), ಹನುಮಂತ ಮಾಳಗಿಮನಿ (25), ಸಹದೇವ ನೂಲ್ವಿ (24) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣ ಭೇದಿಸಿದ್ದು ಹೀಗೆ: ಷಣ್ಮುಖಪ್ಪಗೂ ಹಾಗೂ ಈ ಮೂವರಿಗೆ ಸಂಬಂಧವೇ ಇಲ್ಲ. ಕುಡಿಯುತ್ತ ಕೂತಿದ್ದ ಷಣ್ಮುಖಪ್ಪನ ಬಳಿ ಹೋದ ಈ ಮೂವರು ಮದ್ಯ ಕೇಳಿದ್ದಾರೆ. ಕೊಡುವುದಿಲ್ಲ ಎಂದಿದ್ದಲದೇ ಅವಾಚ್ಯವಾಗಿ ನಿಂದಿಸಿದ್ದಾನೆ. ಇದರಿಂದ ಕುಪಿತಗೊಂಡ ಮೂವರು ಬಿಯರ್ ಬಾಟಲಿಯಿಂದ ಷಣ್ಮುಖಪ್ಪನ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ಜಗಳವಾದ ಜಾಗದಲ್ಲಿ ಬಿದ್ದ ಪರ್ಸ್ ಪ್ರಕರಣ ಭೇದಿಸಲು ಸಿಕ್ಕ ಪುರಾವೆ. ಇದರಲ್ಲಿದ್ದ ಐಡಿ ಕಾರ್ಡ್, ಸಿಸಿ ಕ್ಯಾಮರಾ ಫೂಟೇಜ್ ಮೇಲೆ ಮೂವರು ಕೊಲೆಗಾರರನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.