ಬೆಳಗಾವಿ: ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ನೇಸರಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ವಣ್ಣೂರ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ಸೋಮವಾರ ಮಲಗಿದ್ದ ನಿಂಗಪ್ಪ ಅರವಳ್ಳಿ(41) ಕೊಲೆಯಾಗಿತ್ತು. ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಮೃತನ ಹೆಂಡತಿ ನಿಲ್ಲಮ್ಮ ಅರವಳ್ಳಿ, ಪ್ರಿಯಕರ ಮಹೇಶ ಗೂಳಣ್ಣವರ ಹಾಗೂ ಗಜಿಮನಾಳ ಗ್ರಾಮದ ಯಲ್ಲಪ್ಪ ದುಂಡಪ್ಪ ಕೋಣಿನ ಬಂಧಿಸಿದ್ದಾರೆ.
ಘಟನೆ ವಿವರ: ಕೊಲೆಯಾದ ನಿಂಗಪ್ಪನ ಪತ್ನಿ ಧರ್ಮಸ್ಥಳ ಗ್ರಾಮೀಣಾಭಿವದ್ಧಿ ಯೋಜನೆಯಲ್ಲಿ ವಣ್ಣೂರ ವಲಯದ ಸಂಘಗಳ ಮೇಲೆ ಸೇವಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಅದೇ ಗ್ರಾಮದ ಯುವಕ ಮಹೇಶ ಪರಿಚಯವಾಗಿ ಇವರಿಬ್ಬರಲ್ಲಿ ಸ್ನೇಹ ಬೆಳದಿತ್ತು. ಇದೇ ವಿಷಯಕ್ಕಾಗಿ ಕುಟುಂಬದಲ್ಲಿ ನಿತ್ಯ ಕಲಹ ಉಂಟಾಗುತ್ತಿತ್ತು. ಇದರಿಂದ ಬೇಸತ್ತಿದ್ದ ನೀಲ್ಲಮ್ಮ ಗೆಳೆಯನ ಜತೆ ಸೇರಿ ಗಂಡನನ್ನು ಕೊಲ್ಲಲು ಯಲ್ಲಪ್ಪ ಎಂಬುವವನಿಗೆ ಸುಪಾರಿ ಕೊಟ್ಟಿದ್ದರು. ಇದಕ್ಕಾಗಿ 75 ಸಾವಿರ ರೂ. ಮುಂಗಡ ಹಣ ಕೊಟ್ಟಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.