ಮಂಗಳೂರು: ನಗರದ ಹೊರ ವಲಯದ ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ಫೋಟೋಗ್ರಾಫರ್ ದಿನೇಶ್ ಕೊಲೆ ಯತ್ನ ಪ್ರಕರಣದ ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಅಮ್ಮೆಮಾರ್ ನಿವಾಸಿ ಮಹಮ್ಮದ್ ಅರ್ಷದ್, ಅಬ್ದುಲ್ ರೆಹಮಾನ್ ಹಾಗು ಮಹಮ್ಮದ್ ಸೈಫುದ್ದೀನ್ ಬಂಧಿತರು.ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಬುಧವಾರ ರಾತ್ರಿ ಫರಂಗಿಪೇಟೆಯ ಸ್ಟುಡಿಯೋದೊಳಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರದಿಂದ ದಿನೇಶ್ ಅವರಿಗೆ ಗಂಭೀರ ಹಲ್ಲೆ ನಡೆಸಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಪಿಎಸ್ಐ ಪ್ರಸನ್ನ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.