ಗುರುಪುರ: ಬಜ್ಪೆ ಫೈನಾನ್ಸ್ ಕಾರ್ಪೊರೇಶನ್(ರಿ) ಸೊಸೈಟಿಗೆ ಜು. 4ರಂದು ನುಗ್ಗಿ, ಸಿಬ್ಬಂದಿ ಮೇಲೆ ಆ್ಯಸಿಡ್ ಎರಚಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದ ಮೂವರು ದುಷ್ಕರ್ಮಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಜ್ಪೆ ಶಾಂತಿಗುಡ್ಡೆ ನಿವಾಸಿ ಪ್ರೀತೇಶ್ ಯಾನೆ ಪ್ರೀತು (31), ಸುರತ್ಕಲ್ ಕೋಡಿಕೆರೆ ನಿವಾಸಿ ಧನರಾಜ್ ಯಾನೆ ಧನು (30) ಮತ್ತು ಬಾಳ ಗ್ರಾಮದ ಕುಂಬಳಕೆರೆ ನಿವಾಸಿ ಕುಸುಮಾಕರ ಯಾನೆ ಅಣ್ಣು (37) ಬಂಧಿತ ಆರೋಪಿಗಳು. ಬಂಧಿತರಿಂದ 15 ಲಕ್ಷ ರೂ.ಮೌಲ್ಯದ ಎರಡು ಕಾರು ಮತ್ತು ಒಂದು ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಪ್ರೀತೇಶ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ 2 ಕಳವು ಪ್ರಕರಣ ಹಾಗೂ ಬಜ್ಪೆ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿದೆ. ಧನರಾಜ್ ವಿರುದ್ಧ ಕಾರ್ಕಳ ಠಾಣೆಯಲ್ಲಿ 2 ಕೊಲೆ ಯತ್ನ ಕೇಸು, ಮೂಡುಬಿದಿರೆ ಠಾಣೆಯಲ್ಲಿ ಒಂದು ಕೊಲೆ ಯತ್ನ ಮತ್ತು ಸುರತ್ಕಲ್ ಠಾಣೆಯಲ್ಲಿ ಒಂದು ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಕುಸುಮಾಕರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ 2 ಕಳವು ಪ್ರಕರಣ ಹಾಗೂ ಬಜ್ಪೆ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿದೆ.
ಜು. 4ರಂದು ಹಾಡಹಗಲೇ ಬುರ್ಖಾಧಾರಿ ಮಹಿಳೆ ಹಾಗೂ ಇಬ್ಬರು ಗಂಡಸರು ಲೆಸ್ಲಿ ಡಿ’ಕುನ್ಹಾ ಅವರ ಫೈನಾನ್ಸ್ ಕಚೇರಿಯಲ್ಲಿ ದರೋಡೆಗೈಯಲು ಯತ್ನಿಸಿದ್ದರು. ಬುರ್ಖಾಧಾರಿ ಮಹಿಳೆ ನೇರವಾಗಿ ಕಚೇರಿಯೊಳಗೆ ನುಗ್ಗಿ ಅಲ್ಲಿದ್ದ ಮಹಿಳಾ ಸಿಬ್ಬಂದಿಗೆ ಆ್ಯಸಿಡ್ ಎರಚಿ ಚಿನ್ನಾಭರಣ ಹಾಗೂ ನಗದು ದರೋಡೆಗೆ ಯತ್ನಿಸಿದಳು. ಲೆಸ್ಲಿ ಮತ್ತು ಮಹಿಳಾ ಸಿಬ್ಬಂದಿ ಬೊಬ್ಬೆ ಹಾಕಿದಾಗ ಸ್ಥಳೀಯರು ಕಚೇರಿಗೆ ಆಗಮಿಸುತ್ತಲೇ ದುಷ್ಕರ್ಮಿಗಳು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದರು. ಘಟನೆ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಜ್ಪೆ ಪೊಲೀಸ್ ಠಾಣೆಯ ನಿರೀಕ್ಷಕ ಸಂದೀಪ್ ಜಿ. ಎಸ್. ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.