ಜಿಲ್ಲೆ

ತ್ರಿವೇಣಿ ಸಂಗಮದಲ್ಲಿ ಚರಸ್ ಮಾರುತ್ತಿದ್ದ ಮೂವರ ಬಂಧನ

ಎಂ.ರವಿ

ತಿ.ನರಸೀಪುರ: ಕುಂಭಮೇಳದಲ್ಲಿ ಚರಸ್ ನಂತ ಮಾದಕ ವಸ್ತುವನ್ನು ತೋರಿಸಿ ತ್ರಿವೇಣಿ ಸಂಗಂದಲ್ಲಿ ಪುಣ್ಯಸ್ನಾನ ಮಾಡಲು ಬರುತ್ತಿದ್ದ ಜನರನ್ನು ಆಕರ್ಷಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಮೂವರನ್ನು ಪಟ್ಟಣದ ಪೋಲೀಸರು ಗುರುವಾರ ಬಂಧಿಸಿದ್ದು, ಅವರಿಂದ 70 ಗ್ರಾಂ ತೂಕದ ಚರಸ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಶ್ರೀರಾಂಪುರದ ಓಂಪ್ರಕಾಶ್(44), ರೇಖಾ (33) ಮತ್ತು ರಾಜಸ್ಥಾನದ ಬೇವರ್ ಜಿಲ್ಲೆ, ರಾಯಪುರ ತಾಲೂಕಿನ ದೊಳ್ ಕೋಟ್ ಗ್ರಾಮದ ಪೂಜಾ(20) ಬಂದಿತರು.

ಆರೋಪಿಗಳು ಕುಂಭಮೇಳದ ವೇಳೆ ಹಳೇ ತಿರುಮಕೂಡಲಿನ ಶ್ರೀ ಅಗಸ್ತೇಶ್ವರಸ್ವಾಮಿ ಸ್ನಾನ ಘಟ್ಟದ ಬಳಿ ನಿಂತು ಚರಸ್ ಎಂಬ ಮಾದಕ ವಸ್ತು ತೋರಿಸಿ ಕುಂಭದಲ್ಲಿ ಸ್ನಾನಮಾಡಿ ಮಜಾ ಮಾಡಿ, ಸಂತೋಷಪಡಲು ನಮ್ಮೊಂದಿಗೆ ಬನ್ನಿ ಎಂದು ಭಕ್ತಾದಿಗಳನ್ನು ಹಿಂದಿ ಭಾಷೆಯ ಮೂಲಕ ಆಕರ್ಷಣೆ ಮಾಡುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಅಲ್ಲೇ ಕರ್ತವ್ಯದಲ್ಲಿದ್ದ ಸಿಬ್ಬಂದಿ ಪ್ರಭಾಕರ್, ರತ್ನಮ್ಮ ಹಾಗೂ ಸುದೀಪ್ ಅನುಮಾನಗೊಂಡು ಅವರನ್ನು ವಿಚಾರಿಸಲಾಗಿ ಕೈಯ್ಯಲ್ಲಿದ್ದ ಮಾದಕ ವಸ್ತುವನ್ನು ಬಚ್ಚಿಟ್ಟುಕೊಂಡಿದ್ದರಿಂದ ಕೂಡಲೇ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ಗೊಳಪಡಿಸಲಾಯಿತು.

ವಿಚಾರಣೆ ವೇಳೆ ನದಿ ಸಂಗಮದಲ್ಲಿ ಕುಂಭಸ್ನಾನ ಮಾಡಿ, ಚರಸ್ ಸೇವಿಸಲು ಬಂದಿರುವುದಾಗಿ ಆರೋಪಿ ರೇಖಾ ತಿಳಿಸಲಾಗಿ ಸಂಗಮ ಸ್ನಾನಘಟ್ಟದಲ್ಲಿ ಅಕ್ರಮವಾಗಿ ಮಾದಕ ವಸ್ತು ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪೋಲೀಸರು ಪ್ರಕರಣ ದಾಖಲು ಮಾಡಿ ಅವರಿಂದ 7 ಸಾವಿರ ರೂ. ಮೌಲ್ಯದ 70 ಗ್ರಾಂ ತೂಕದ ಚರಸ್‌ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ನಂಜನಗೂಡು ಉಪ ವಿಭಾಗದ ಡಿವೈಎಸ್‌ಪಿ ರಘು ಅವರ ಮಾರ್ಗದರ್ಶನದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.