ಮಂಗಳೂರು: ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಕಾವೂರಿನ ಸಹಕಾರಿ ಸಂಸ್ಥೆಯೊಂದಕ್ಕೆ 6.24 ಲಕ್ಷ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕಾವೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಆಕಾಶಭವನ ಅನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39), ನಂತೂರು ಬಿಕರ್ನಕಟ್ಟೆ ನಿವಾಸಿ ಮಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್(34) ಮತ್ತು ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ಅಬ್ದುಲ್ ರಮೀಝ್ (33) ಬಂಧಿತ ಆರೋಪಿಗಳು.
ಆರೋಪಿಗಳಿಂದ 5 ಲಕ್ಷ ರೂ. ನಗದು, ಸುಮಾರು 45 ಗ್ರಾಂ ತೂಕದ ನಕಲಿ ಚಿನ್ನದ ಒಡವೆಗಳು, 20 ಲಕ್ಷ ರೂ, ಮೌಲ್ಯದ ಕಾರು ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ 26.50 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಆಕಾಶಭವನ ನಿವಾಸಿ ಹಾರೀಫ್ ಅಬೂಬಕ್ಕರ್ ಅ.9ರಂದು ಕಾವೂರು ಬಳಿಯ ವಿವಿದೋದ್ದೇಶ ಸಹಕಾರಿ ಸಂಘದಲ್ಲಿ ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನಾಭರಣಗಳನ್ನು ಅಡವು ಇರಿಸಿ 6.24 ಲಕ್ಷ ರೂ. ಸಾಲ ಪಡೆದಿದ್ದ. ಚಿನ್ನದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಆಭರಣಗಳನ್ನು ಪರಿಶೀಲನೆಗೆ ಒಳ ಪಡಿಸಿದಾಗ ನಕಲಿ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ನೀಡಲಾಗಿತ್ತು. ಕಾರ್ಯಚರಣೆ ನಡೆಸಿದ ಪೊಲೀಸರು ಹಾರೀಫ್ ಹಾಗೂ ಆತನ ಸಹವರ್ತಿಗಳಾಗಿದ್ದ ಇತರ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬಂದಿಯವರಾದ ಎ.ಎಸ್.ಐ. ಚಂದ್ರಹಾಸ ಸನೀಲ್. ಎಚ್.ಸಿ ಗಳಾದ ಸಂಬಾಜಿ ಕದಂ, ಕೆಂಚನ್ ಗೌಡ, ಪ್ರಮೋದ್ ಕುಮಾರ್. ಪಿ.ಸಿ. ಗಳಾದ ನಾಗರಾಜ್ ಬೈರಗೊಂಡ. ಪ್ರವೀಣ್, ರಿಯಾಝ್, ತೀರ್ಥಪ್ರಸಾದ್, ಆನಂದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.