ಹೊಸದುರ್ಗ: ವೈಚಾರಿಕ ಚಿಂತನೆ ಹೊಂದಿರುವ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರಿಗೆ ಕಿಡಿಗೇಡಿಗಳು ಬೆದರಿಕೆ ಪತ್ರ ಬರೆದು, ಜೀವ ಬೆದರಿಕೆ ಹಾಕಿರುವುದನ್ನು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಖಂಡಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಗಳು, ಬೆದರಿಕೆ ಪತ್ರ ಬಂದಿರುವುದು ಸ್ವಾಮೀಜಿ ಅವರ ವಿಚಾರಗಳು ಜನಪರವಾಗಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಕಂದಾಚಾರಿಗಳು, ಪಟ್ಟಭದ್ರರು ಜೀವಪರ ಚಿಂತನೆಗಳನ್ನು ಸಹಿಸುವುದಿಲ್ಲ. ಈ ಕಾರಣಕ್ಕೆ ಇಂತಹ ಬೆದರಿಕೆ ಹಾಕುತ್ತಾರೆ. ಇಂತಹ ನಡೆಗೆ ಸೊಪ್ಪು ಹಾಕಬೇಕಿಲ್ಲ, ಭೀತಿ ಪಡಬೇಕಿಲ್ಲ. ಶರಣರ ಕರುಣೆ ಹಾಗೂ ನಮ್ಮಂಥವರ ಬೆಂಬಲ ಸದಾ ಅವರಿಗೆ ಇರಲಿದೆ ಎಂದಿದ್ದಾರೆ.
ಸರ್ಕಾರ ಕೂಡಲೇ ಇಂತಹ ಬೆದರಿಕೆ ಹಾಕುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕು. ಆಗ ಮಾತ್ರ ಇಂತಹ ಕಿಡಿಗೇಡಿತನಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದ್ದಾರೆ.