ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ರಾಜ್ಯದಲ್ಲಿ ನಿಷೇಧಿತ ಬುಲ್‌ಟ್ರಾಲ್ ಮೀನುಗಾರಿಕೆ ಮತ್ತೆ ಸದ್ದು ಮಾಡುತ್ತಿದ್ದು, ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಉಗ್ರ ಹೋರಾಟದ ನಡೆಸುವ ಎಚ್ಚರಿಕೆ ನೀಡುವುದರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕಾ ಋತು ಆರಂಭಗೊಂಡು ಎರಡು ತಿಂಗಳು ಕಳೆದರೂ ಗಂಗೊಳ್ಳಿ ಬಂದರಿನಲ್ಲಿ ಸಣ್ಣ ಮೀನುಗಾರಿಕಾ ಬೋಟುಗಳು ಪೂರ್ಣ ಪ್ರಮಾಣದ ಮೀನುಗಾರಿಕೆ ಆರಂಭಿಸಿಲ್ಲ. ಹೀಗಾಗಿ ಮೀನುಗಾರಿಕಾ ಋತು ಆರಂಭದ ಮೂರು ತಿಂಗಳು ಸಣ್ಣ ಟ್ರಾಲ್ ಬೋಟುಗಳು ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದು, ಉತ್ತಮ ಮತ್ಸೃಸಂಪತ್ತು ದೊರಕುತ್ತಿದ್ದವು. ಫಿಶಿಂಗ್ ಮತ್ತು ಆಳ ಸಮುದ್ರ ಮೀನುಗಾರಿಕೆ ನಡೆಸುವ ಬೋಟುಗಳು ದಡದಿಂದ ನಿಗದಿತ ದೂರದಲ್ಲಿ ಮೀನುಗಾರಿಕೆ ನಡೆಸಬೇಕೆಂಬ ಸ್ಪಷ್ಟ ಸೂಚನೆ ಇದ್ದರೂ ಸರ್ಕಾರದ ಆದೇಶ ಉಲ್ಲಂಘಿಸಿ ಬುಲ್ ಟ್ರಾಲ್ ಮೀನುಗಾರಿಕೆ ನಡೆಸಲಾಗುತ್ತಿದೆ ಎಂಬುದು ನಾಡದೋಣಿ ಮೀನುಗಾರರ ಕಣ್ಣು ಕೆಂಪಾಗಿಸಿದೆ.
ಸಣ್ಣ ಟ್ರಾಲ್ ಬೋಟ್‌ನವರು 50 ವರ್ಷಗಳಿಂದ ಮೀನುಗಾರಿಕಾ ಋತು ಆರಂಭವಾದ ಬಳಿಕ ಮೂರು ತಿಂಗಳು ಬುಲ್‌ಟ್ರಾಲ್ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆಗೆ ನಾಡದೋಣಿ ಮೀನುಗಾರರು ತಡೆಯೊಡ್ಡುತ್ತಿರುವುದು ಬುಲ್ ಟ್ರಾಲ್ ಮೀನುಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಮೀನುಗಾರಿಕೆಯ ಪ್ರಾರಂಭದ ಮೂರು ತಿಂಗಳು ಸಮುದ್ರ ತಳಮಟ್ಟದ ನೀರು ತಂಪಾಗಿರುವುದರಿಂದ ಮೀನುಗಳ ಓಡಾಟವು ನೀರಿನ ಮೇಲ್ಭಾಗದಲ್ಲಿರುತ್ತದೆ. ಈ ಕಾರಣಕ್ಕಾಗಿ ಹಿಂದಿನಿಂದ 12 ನಾಟಿಕಲ್ ಮೈಲಿನೊಳಗೆ ಮೀನುಗಾರಿಕೆ ನಡೆಸುತ್ತಿದ್ದೇವೆ ಎಂಬುದು ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುವ ಮೀನುಗಾರರ ವಾದ.
ಕಡಲಲ್ಲಿ ಎರಡು ಫಿಶಿಂಗ್ ಬೋಟುಗಳು ಒಟ್ಟಾಗಿ ಒಂದೇ ಬಲೆಯಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ಬುಲ್‌ಟ್ರಾಲ್ ಎನ್ನುತ್ತಾರೆ. ಒಂದೊಂದು ಬೋಟಿನಲ್ಲಿ ಸುಮಾರು 6-8 ಮೀನುಗಾರರಿದ್ದು, ಎರಡು ಬೋಟ್‌ನವರು ಒಟ್ಟಾಗಿ ಒಂದೇ ಬಲೆ ಉಪಯೋಗಿಸಿ ಮೀನುಗಾರಿಕೆ ನಡೆಸುತ್ತಾರೆ. ಈ ಮೀನುಗಾರಿಕೆಯಲ್ಲಿ ಬೇರೆ ಬೇರೆ ಜಾತಿಯ ಮೀನುಗಳಿಗೆ ಬೇರೆ ಬೇರೆ ಬಲೆಗಳನ್ನು ಉಪಯೋಗಿಸಲಾಗುತ್ತದೆ.
ಬುಲ್‌ಟ್ರಾಲ್ ಮೀನುಗಾರಿಕೆಯಿಂದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಮೇಲೆ ದೊಡ್ಡ ಪೆಟ್ಟು ಬೀಳಲಾರಂಭಿಸಿದೆ. ಬುಲ್ ಟ್ರಾಲ್ ಮೀನುಗಾರಿಕೆಯಿಂದ ಮೀನುಗಳು ದಡಕ್ಕೆ ಬರುವುದು ಕಡಿಮೆಯಾಗುತ್ತಿದ್ದು, ಮೀನುಗಳ ಸಂತತಿ ನಾಶವಾಗುತ್ತಿದೆ. ಬುಲ್ ಟ್ರಾಲ್ ಮೀನುಗಾರಿಕೆಯಿಂದ ನಾಡದೋಣಿ ಮೀನುಗಾರರ ಜೀವನಕ್ಕೆ ತೊಂದರೆಯಾಗಿದೆ. ಜೀವದ ಹಂಗು ತೊರೆದು ಮೀನುಗಾರಿಕೆಗೆ ತೆರಳಿದರೆ ಬರಿಗೈಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ನಾಡದೋಣಿ ಮೀನುಗಾರರ ಅಸಮಾಧಾನವಾಗಿದೆ.
ಕಾನೂನು ಬಾಹಿರವಾಗಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸಿದರೆ ಮುಂದಿನ ದಿನಗಳಲ್ಲಿ ಸಂಘರ್ಷ ಉಂಟಾಗುವ ಸಂಭವವಿದೆ. ಕೂಡಲೇ ಅಧಿಕಾರಿಗಳು, ಸಚಿವರು ಹಾಗೂ ಸರ್ಕಾರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮೀನುಗಾರರು ಹೋರಾಟ ನಡೆಸುತ್ತೇವೆ-ಸುರೇಶ ಖಾರ್ವಿ, ಅಧ್ಯಕ್ಷ, ಶ್ರೀ ರಾಮ ಮಂದಿರ ಮೀನುಗಾರರ ಕ್ರಿಯಾ ಸಮಿತಿ, ಮರವಂತೆ